ಸರ್ಕಾರದ ಕ್ರಮಕ್ಕೆ ಖಂಡನೆ
ಕ.ಪ್ರ.ವಾರ್ತೆ ಹಾಸನ ಏ. 29
ಶೃಂಗೇರಿಯ ತನಿಕೋಡು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಡೆದುತ್ತಿರುವ ರೀತಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಗೋವುಗಳನ್ನು ಸಾಗಿಸುವಾಗ ಎಎನ್ಎಫ್ನ ಪೊಲೀಸರ ಗುಂಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯ. ಮೊದಲಿನಿಂದಲೂ ಸಮಾಜವನ್ನು ಒಡೆಯುವ ಪಕ್ಷಪಾತಿ ಧೋರಣೆಗಳನ್ನು ತನ್ನ ಆಡಳಿತದಲ್ಲಿ ರೂಢಿಸಿಕೊಂಡಿದ್ದ ಈ ಸರ್ಕಾರ, ಈ ಪ್ರಕರಣದಲ್ಲೂ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ. ಅಪರಾಧಿಗಳಿಗೆ ಕುಮ್ಮಕ್ಕು ನೀಡುವಂತಹ ಹಾಗೂ ಕರ್ತವ್ಯನಿರತ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಹ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಬೇಜವಾಬ್ದಾರಿತನ: ಈ ಹಿಂದೆ ಅನೇಕ ಬಾರಿ ನಕ್ಸಲ್ ಕೃತ್ಯಗಳು ನಡೆದಿದ್ದ ಶೃಂಗೇರಿಯ ತನಿಕೋಡಿನಲ್ಲಿ ನಿಯೋಜನೆಯಾಗಿದ್ದ ಎಎನ್ಎಫ್ ಪಡೆಯ ಪೊಲೀಸರು ರಾತ್ರಿ ವೇಳೆಯಲ್ಲಿ ಕದ್ದು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಬೀರ್ ಮತ್ತು ಸಂಗಡಿಗರ ವಾಹನಗಳನ್ನು ನಿಲ್ಲಿಸಿ ತಪಾಸಣೆಗೊಳಪಡಿಸಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ, ಕಾನೂನಿನ್ವಯ ತಪಾಸಣೆಗೊಳಪಡದೇ ವಾಹನದಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಪೊಲೀಸರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದಾಗಿ, ಮೊದಲೇ ಸೂಕ್ಷ್ಮ ಪರಿಸ್ಥಿತಿಯ ಅರಿವಿದ್ದ ನಕ್ಸಲ್ ನಿಗ್ರಹ ದಳದ ಪೊಲೀಸರು ಅನುಮಾನಗೊಂಡು ಗುಂಡು ಹಾರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಘಟನೆ ನಡೆದಿರುವುದು ಹೀಗೆ. ಆದರೆ, ಇದನ್ನು ಅರಿಯದ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಓಲೈಕೆ ರಾಜಕಾರಣ: ಗುಲ್ಬರ್ಗದಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿಯಾದ ಇನ್ಸ್ಪೆಕ್ಟರ್ ಕುಟುಂಬಕ್ಕೆ ಬಿಜೆಪಿ ಮತ್ತು ಸಾರ್ವಜನಿಕರಿಂದ ಬಂದ ಒತ್ತಡದ ನಂತರ ಕೇವಲ ರು. 5 ಲಕ್ಷ ಪರಿಹಾರ ನೀಡಿದ ಸರ್ಕಾರ ಅಕ್ರಮ ಗೋ ಸಾಗಾಣಿಕೆ ಮಾಡುತ್ತಿದ್ದ ಕಬೀರ್ ಕುಟುಂಬಕ್ಕೆ ರು. 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಗೃಹ ಸಚಿವರು ದೊಡ್ಡ ಕೃಪೆ ತೋರಿದ್ದಾರೆ. ಸಚಿವ ಯು.ಟಿ.ಖಾದರ್ ಅವರು ಕಬೀರ್ ಮತ್ತು ಸಂಗಡಿಗರ ಪರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಅಪರಾಧವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಕರಣ: ಸಚಿವ ರಮಾನಾಥ ರೈ ಅವರು ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಸಂಘ ಪರಿವಾರವನ್ನು ಎಳೆದು ತರುವ ಮೂಲಕ ಅಲ್ಪಸಂಖ್ಯಾತರಲ್ಲಿ ಕೋಮು ಭಾವನೆ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂಚು ನಡೆಸಿದ್ದಾರೆ.
ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಚಾಲಕ ಬಲವಂತದ ಹೇಳಿಕೆ ನೀಡಿರುವುದಾಗಿ ಹೇಳಿದ್ದಾನೆ.
ಪ್ರಕರಣದಲ್ಲಿ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದ ಪೇದೆಯ ಮೇಲೆ ಸರ್ಕಾರ ಕೊಲೆ ಪ್ರಕರಣ ದಾಖಲಿಸಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಪ್ರಸನ್ನಕುಮಾರ್, ಬಸವರಾಜು, ತಮ್ಮೇಗೌಡ, ಚೆನ್ನಕೇಶವ, ಉದಯ್ ಕುಮಾರ್, ಮನೋಹರ್ ಹಾಗೂ ಇತರರು ಇದ್ದರು.