ಆಲೂರಿನಲ್ಲಿ 8 ಮಂದಿಗೆ ನಾಯಿ ಕಡಿತ
ಆಲೂರು: ತಾಲೂಕಿನ ಕರಿಗುಡ್ಡನಹಳ್ಳಿ, ಹಸಗನೂರು ಗ್ರಾಮಗಳಲ್ಲಿ ಹುಚ್ಚು ನಾಯಿಯೊಂದು ಕಡಿದು 8 ಜನ ತೀವ್ರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಕರಿಗುಡ್ಡನಹಳ್ಳಿ ಗ್ರಾಮದಲ್ಲಿ ಮೊದಲು ಕರುವೊಂದಕ್ಕೆ ಕಚ್ಚಿದ ಹುಚ್ಚು ನಾಯಿ ಮನಸೋ ಇಚ್ಛೆ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ, ಈ ಗ್ರಾಮದ ಐದು ಜನ ಹಾಗೂ ಹಸಗನೂರು ಗ್ರಾಮದಲ್ಲಿ ಮೂವರನ್ನು ಕಚ್ಚಿ ಗಾಯಗೊಳಿಸಿದೆ.
ಗಾಯಾಳುಗಳ ಪೈಕಿ ಇಬ್ಬರು ಬಾಲಕಿಯರ ಮುಖಕ್ಕೆ ಕಚ್ಚಿರುವ ನಾಯಿ ತುಟಿ, ಮೂಗು, ಕೆನ್ನೆಯನ್ನು ಗಾಯಗೊಳಿಸಿದ್ದರೆ, ಇನ್ನುಳಿದವರ ಕೈಕಾಲು ಹಾಗೂ ಹೊಟ್ಟೆಗೆ ತೀವ್ರವಾಗಿ ಕಟ್ಟಿ ಗಾಯಗೊಳಿಸಿದೆ. ನಂತರ ರೊಚ್ಚಿಗೆದ್ದ ಗ್ರಾಮಸ್ಥರು ನಾಲ್ಕು ಬೈಕ್ಗಳಲ್ಲಿ ಅಟ್ಟಾಡಿಸಿಕೊಂಡು ಹೋಗಿ ದೊಣ್ಣೆಯಿಂದ ಹೊಡೆದು ಕೊಂದು ಹಾಕಿದ್ದಾರೆ. ಕರಿಗೌಡನಹಳ್ಳಿ ಹಾಗೂ ಹಸಗನೂರಿನ ಪೂಜಾ, ಭರತ್, ಶಶಾಂಕ್, ವೆಂಕಟೇಶ್, ಶರತ್, ಶೇಖರ್ ಸೇರಿದಂತೆ 8 ಜನರಿಗೆ ನಾಯಿ ತೀವ್ರಗಾಗಿ ಗಾಯಗೊಳಿಸಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಾಕು ಪ್ರಾಣಿಗಳ ಮೇಲೆ ನ ಮುಗಿ ಬೀಳುತ್ತಿದ್ದು, ಇವುಗಳ ಪೈಕಿ ಕೆಲವು ಹುಚ್ಚು ಹಿಡಿದ ನಾಯಿಗಳೂ ಸೇರಿವೆ. ಇವು ಹಸು ಹಾಗೂ ಕುರಿಗಳಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಅವು ಕಚ್ಚಿದ ಕುರಿ ಹಾಗೂ ಕೋಳಿಗಳನ್ನು ಸೇವಿಸಿದಲ್ಲಿ, ಸೋಂಕು ಹರಡುವ ಭೀತಿಯಲ್ಲಿ ಜನರಿದ್ದಾರೆ.
ಆದ್ದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.