ಜನರಿಲ್ಲಿ ನಾಯಿಪಾಲು
ಕ.ಪ್ರ.ವಾರ್ತೆ ಹಾಸನ ಏ. 30
ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನತೆ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ಬೀದಿನಾಯಿಗಳ ಉಪಟಳದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಕೆಲ ಹುಚ್ಚು ನಾಯಿಗಳು ಏಕಾಏಕಿ ದಾಳಿ ಇಟ್ಟು ಮಕ್ಕಳೋಪಾದಿಯಲ್ಲಿ ತೀವ್ರವಾಗಿ ಗಾಯಗೊಳ್ಳುತ್ತಿದೆ. ಹಾವಳಿಯಿಂದ ಜನ ಭಯಬೀತರಾಗಿದ್ದಾರೆ.
ಜಿಲ್ಲೆಯ 8 ತಾಲೂಕುಗಳಲ್ಲಿ ಬೀದಿನಾಯಿಗಳ ಸಂತತಿ ಹೆಚ್ಚಾಗುತ್ತಿದ್ದು, ಹಾಸನ, ಆಲೂರು, ಚನ್ನರಾಯಪಟ್ಟಣ, ಅರಕಲಗೂಡು ಸೇರಿದಂತೆ ಇತರೆ ಕಡೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಸಂತತಿ ಹೆಚ್ಚಾಗಿರುವುದರಿಂದ ಬೀದಿಗಳಲ್ಲಿ ನಾಯಿ ಕಾಟ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಸಾರ್ವಜನಿಕರು ನಾಯಿಗಳ ಹಾವಳಿಗಳಿಂದ ಬೇಸತ್ತು ಹೋಗಿದ್ದಾರೆ. ಬೀದಿನಾಯಿಗಳ ಕಡಿತಕ್ಕೆ ತುತ್ತಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಇನ್ನೂ ಸಣ್ಣ ಪುಟ್ಟ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದಾಗ ನಾಯಿಗಳ ಕ್ರೌರ್ಯಕ್ಕೆ ತುತ್ತಾಗುತ್ತಿದ್ದಾರೆ.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ನಾಯಿ ಹಾವಳಿ ತಡೆಗಟ್ಟಲು ಸಂತಾನಹರಣ ನಿಯಂತ್ರಣ ಕ್ರಮ ಕೈಗೊಂಡಿದ್ದರೂ ಹಾವಳಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.
ಔಟ್ ಸೋರ್ಸಿಂಗ್ ಸಂತಾನ!: ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಷ್ಟು ಬೀದಿನಾಯಿಗಳಿದ್ದು, ಹಾಸನ ನಗರದಲ್ಲಿ ಸುಮಾರು 5 ಸಾವಿರ ಬೀದಿ ನಾಯಿಗಳಿವೆ. ಈ ಪೈಕಿ ಎರಡೂವರೆ ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಯೋಜನೆಯಡಿ ಕಿವಿಗಳನ್ನು ಕತ್ತರಿಸಲಾಗಿದೆ. ಇದಕ್ಕಾಗಿಯೇ ನಗರಸಭೆ ತನ್ನ ಬಜೆಟ್‌ನಲ್ಲಿ ಸಾವಿರಾರು ರು. ಅನುದಾನ ಮೀಸಲಿರಿಸಿದೆ. ಆದರೆ ಕೆಲವು ನಾಯಿಗಳು ಬೇರೆಡೆಯಿಂದ ನಗರದೊಳಗೆ ಬಂದು ಬೀದಿನಾಯಿಗಳ ಸಂತತಿ ಹೆಚ್ಚಾಗುವಂತೆ ಮಾಡುತ್ತಿವೆ. ಇದರಿಂದ ನಗರದ ಬೀದಿಗಳಲ್ಲಿ ನಾಯಿಗಳ ಹಿಂಡು ಹೆಚ್ಚಾಗಿ ಸಾರ್ವಜನಿಕ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿವೆ.
ಮನವಿ: ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಅನಿವಾರ್ಯತೆ ಇದ್ದು, ನಾಯಿಗಳ ಹಾವಳಿಯಿಂದ ಮಕ್ಕಳೋಪಾದಿಯಲ್ಲಿ ರಸ್ತೆಗಳಲ್ಲಿ ಓಡಾಡಲು ಕಷ್ಟಕರವಾದ ವಾತಾವರಣ ನಿರ್ಮಾಣವಾಗಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಡಿಸಿ ಸೂಚನೆ ಬೆನ್ನಲ್ಲೇ ಹೆಚ್ಚಾದ ಸಮಸ್ಯೆ
ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನತೆ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದ್ದು, ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ಅದೇ ಸ್ಥಳಕ್ಕೆ ಬಿಡುವ ಜವಾಬ್ದಾರಿ ವಹಿಸಲು ಅಲ್ಪಾವಧಿ ಟೆಂಡರ್ ಕರೆಯಲು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು, ನಗರಸಭೆ ಅಧಿಕಾರಿಗಳಿಗೆ ಸೂಚನೆ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಬೀದಿ ನಾಯಿಗಳು ಆರ್ಭಟಿಸಿವೆ. ಹಲವೆಡೆ ದಾಳಿಯನ್ನು ಇಟ್ಟು ಸಾರ್ವಜನಿಕರನ್ನು ತೊಂದರೆಗೀಡುಮಾಡುತ್ತಿವೆ.
ನಾಯಿಗಳ ಹಾವಳಿ ಉಲ್ಬಣಗೊಂಡಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ನಾಯಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮುಂದಾಗಿ, ನಾಯಿಗಳ ಹಾವಳಿಯಿಂದ ಜನತೆಗೆ ರಕ್ಷಣೆ ಒದಗಿಸಬೇಕು.
ಟಿ ಮಂಜಪ್ಪ, ಸಾರ್ವಜನಿಕ
ನಾಯಿಗಳು ಹೆಚ್ಚಾಗಿದ್ದು, ಮಕ್ಕಳು ಸೇರಿದಂತೆ ದೊಡ್ಡವರೂ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಮನೆ ಮುಂದೆ ಮಕ್ಕಳು ಆಟವಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ನಾಯಿಗಳ ಹಾವಳಿಗೆ ಮುಕ್ತಿ ನೀಡಬೇಕು.
ಟಿ ಸರೋಜ, ಗೃಹಿಣಿ
ಪಿ. ರವಿಕುಮಾರ್