ಜಾಗತೀಕರಣದಿಂದ ಮೂಲ ವಿಜ್ಞಾನ ನೇಪಥ್ಯಕ್ಕೆ
ಕನ್ನಡಪ್ರಭ ವಾರ್ತೆ ಹಾಸನ ಏ. 30
ಜಾಗತೀಕರಣದ ಶಕೆಯಿಂದ ಮೂಲ ವಿಜ್ಞಾನದ ಕಲಿಕೆ ಮೂಲೆಗುಂಪಾಗಿ ಕೇವಲ ಅನ್ವಯಿಕ ವಿಜ್ಞಾನಕ್ಕೆ ಮಾತ್ರ ಕಲಿಕಾ ಮಹತ್ವ ನೀಡಲಾಗುತ್ತಿದೆ ಎಂದು ಕಾರ್ಮಿಕ ಮುಖಂಡ ಧರ್ಮೇಶ್ ವಿಷಾದಿಸಿದರು.
ಅವರು ಇತ್ತೀಚೆಗೆ ನಗರದ ಎಸ್.ಜಿ.ಆರ್. ಶಾಲಾ ಆವರಣದಲ್ಲಿನ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ- ವಿಜ್ಞಾನ ಸಮಿತಿಯ ಹಾಸನ ಜಿಲ್ಲಾ ಸಮಿತಿಯು ಇತ್ತೀಚೆಗೆ ಆಯೋಜಿಸಿದ್ದ ಬಿಜಿವಿಎಸ್ ಸಂಪನ್ಮೂಲ ಕೇಂದ್ರ ಹಾಗೂ ವಿಶ್ವ ಭೂ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಾಗಾಗಿ ಕೇವಲ ಇಂಜಿನಿಯರ್ ಮತ್ತು ಡಾಕ್ಟರ್‌ಗಳೇ ದೇಶದಲ್ಲಿ ಉತ್ಪತ್ತಿಯಾಗಿ ನಿರುದ್ಯೋಗ ಕುಂಡದಲ್ಲಿ ಸೇರಿಸಲಾಗುತ್ತಿದೆ. ನೈಜ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭ್ಯುದಯಕ್ಕೆ ಬೇಕಾದ ಸಂಶೋಧನೆ, ಮಾನವಿಕ ವಿಜ್ಞಾನ ಹಾಗೂ ಜ್ಞಾನ ಸಂಪನ್ಮೂಲ ಸೃಷ್ಟಿಯಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಅನಿವಾರ್ಯತೆ ಇದೆ: ಹಾಸನ ಜಿಲ್ಲೆಯ ಬೆಳೆ ಹಾಗೂ ಮಳೆಯ ಪ್ರಮಾಣ, ಅಂತರ್ಜಲ, ಪರಿಸರ, ನೈರ್ಮಲ್ಯ ಹಾಗೂ ಶೈಕ್ಷಣಿಕ ಸ್ಥಿಗತಿಗಳ ಕುರಿತು ಸಂಪನ್ಮೂಲ ಕೇಂದ್ರ ಅಧ್ಯಯನ ಮಾಡಬೇಕು ಹಾಗೂ ಜಿಲ್ಲೆಯ ಸಮಗ್ರ ಸಂಪನ್ಮೂಲ ನಕಾಶೆ ಸಿದ್ಧಪಡಿಸುವ ಯೋಜನೆ ರೂಪಿಸಬೇಕು ಮತ್ತು ಹಾಸನ ಜಿಲ್ಲೆಯ ವಿದ್ಯಾರ್ಥಿಗಳ ಬೋಧನಾ ಸಾಮರ್ಥ್ಯಕ್ಕೆ ಒತ್ತಾಸೆಯಾಗಿ ಸಂಪನ್ಮೂಲ ಕೇಂದ್ರ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.
ಸಂಪನ್ಮೂಲ ಕೇಂದ್ರ ಕಟ್ಟಬೇಕು: ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಲೆನಾಡು ಜನಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲೆಯ ಕೃಷಿ, ಮಳೆ ಹಾಗೂ ಬದುಕಿನ ಮೇಲೆ ಬೀರಿರುವ ಪರಿಣಾಮದ ಕುರಿತು ಅಧ್ಯಯನ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕೇಂದ್ರ ವಿವಿಧ ಜನಪರ ಸಂಘಟನೆಗಳ ವಿಶಾಲ ಸಂಪನ್ಮೂಲ ಕೇಂದ್ರವನ್ನು ಕಟ್ಟಬೇಕು ಎಂದು ತಿಳಿಸಿದರು.
ವಿಸ್ತರಿಸಬೇಕು: ಬಿಜಿವಿಎಸ್‌ನ ಮುತುವರ್ಜಿಯಿಂದ ಅಧ್ಯಯನ ವೃತ್ತ, ಅನಿಸಿಕೆ- ಅಭಿವ್ಯಕ್ತಿ, ಸಾಂಸ್ಕೃತಿಕ ಸಂವಹನದಂತಹ ನಿಗದಿತ ಚಟುವಟಿಕೆಗಳು ನಿರಂತರವಾಗಿ ನಗರದಲ್ಲಿ ನಡೆಯುತ್ತಿದೆ. ಈ ಚಟುವಟಿಕೆ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಬೇಕು. ಆಗ ಜನರಲ್ಲಿ ವಿಮರ್ಶಾ ಗುಣ, ಮಾತನಾಡುವ ಕಲೆ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದರು.
ಕೇಂದ್ರದ ಹಿಂದಿನ ಉದ್ದೇಶ: ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ- ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಟಿ. ಗುರುರಾಜ್ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸಲು ಪ್ರೇರೇಪಿಸುವ ಸಲುವಾಗಿ ಸಂಪನ್ಮೂಲ ಕೇಂದ್ರ ತೆರೆದಿದೆ ಎಂದರು.
ವರ್ಗಾಯಿಸಲು ಕೇಂದ್ರ: ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಸಂವಹನ ಜಿಲ್ಲಾ ಸಂಚಾಲಕ ಅಹಮದ್ ಹಗರೆ, ನಗರದಲ್ಲಿ ನಡೆಯುತ್ತಿರುವ ಬಾಲ ವಿಜ್ಞಾನಿ, ಅನಿಸಿಕೆ-ಅಭಿ ವ್ಯಕ್ತಿ, ಅಧ್ಯಯನ ವೃತ್ತ ಚಟುವಟಿಕೆಗಳು ಸಮಗ್ರ ರೂಪದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಜಿಲ್ಲೆಯಲ್ಲಿ ಸೃಷ್ಟಿಸಲು ಹಾಗೂ ಜಿಲ್ಲೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾಹಿತಿಯನ್ನು ಹೊಸ ಪೀಳಿಗೆಗೆ ವರ್ಗಾಯಿಸಲು ಈ ಕೇಂದ್ರ ತೆರೆಯಲಾಗಿದೆ ಎಂದರು.
ಬಿಜಿವಿಎಸ್ ಜಿಲ್ಲಾ ಸಹ ಕಾರ್ಯದರ್ಶಿ ಮಮತ ಶಿವು ವಂದಿಸಿದರು.