ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾರಕಕ್ಕೇರಿದ ರಾಮ ತಾಪ

Mainashree
Updated On : 1 May 2014, 12:04 pm

ಕ.ಪ್ರ.ವಾರ್ತೆ  ಆಲೂರು  ಏ.30
ಯೋಗ ಗುರು ಬಾಬಾ ರಾಮ್‌ದೇವ್ ದಲಿತರಿಗೆ ಅಪಮಾನಕರವಾದ ಹೇಳಿಕೆ ನೀಡಿರುವ ವಿರುದ್ಧ ತಾಲೂಕಿನ ನಾನಾ ದಲಿತ ಸಂಘಟನೆಗಳು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಪಟ್ಟಣದ ಕೊನೆಪೇಟೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪಟ್ಟಣದಪ್ರಮುಖ ರಸ್ತೆಗಳಲ್ಲಿ  ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ಮಹದೇವಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದಲಿತ ಮುಖಂಡ ದೇವರಾಜ್ ಮಾತನಾಡಿ, ಬಾಬಾ ರಾಮ್‌ದೇವ್ ಕಾವಿ ಧರಿಸಿರುವ ಗೋಮುಖ ವ್ಯಾಘ್ರನಾಗಿದ್ದು, ಆತನನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.
ಚಂದ್ರಪ್ರಸಾದ ಮೇರ್ವೆ ಮಾತನಾಡಿ, ಕಾವಿ ಧರಿಸಿ ಎಲ್ಲ ಜಾತಿಯವರನ್ನು ಸಮಾನವಾಗಿ ಕಾಣಬೇಕಾದ ಡೋಂಗಿ ಸನ್ಯಾಸಿ ಬಾಬಾ ರಾಮ್ ದೇವ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದರು.
ಜೀವಾವಧಿ ಶಿಕ್ಷೆ ವಿಧಿಸಿ: ಬಸವರಾಜ್ ಮಾತನಾಡಿ, ಜೀವಕ್ಕೆ ಹೆದರಿ ಹೆಂಗಸಿನ ವೇಷ ತೊಟ್ಟು, ಓಡಿ  ಹೋಗಿದ್ದ  ಬಾಬಾ ರಾಮದೇವ್, ಹಿಂದುಳಿದ ವರ್ಗ ಹಾಗೂ ದಲಿತರ ಬಗ್ಗೆ ಅವಮಾನಕಾರ ಹೇಳಿಕೆ ನೀಡಿ ಸಾಮರಸ್ಯ ಕಲಕುವಂತಹ ಕೆಲಸ ಮಾಡಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸಬೇಕೆಂದರು.
ದಲಿತರ ದಂಗೆ: ಜಿಲ್ಲಾ ಮಾದಿಗ ದಂಡೋರ ಉಪಾಧ್ಯಕ್ಷ ವೆಂಕಟಯ್ಯ ಮಾತನಾಡಿ, ದಲಿತರನ್ನು ಕೀಳಾಗಿ ಕಾಣುತ್ತಿರುವ ಬಾಬಾ ರಾಮದೇವ್‌ಗೆ ಗುಂಡಿಕ್ಕಿ  ಕೊಲ್ಲಬೇಕು ಅಥವಾ ಸರ್ಕಾರದವರು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ದಲ್ಲಿ ನಿರಂತರವಾಗಿ  ಪ್ರತಿಭಟನೆ ಕೈಗೊಂಡು ದಲಿತರು ದಂಗೆದ್ದು, ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೇನಾಮಿ ಆಸ್ತಿ: ಹೊನ್ನಪ್ಪ ಮಾತನಾಡಿ, ಶ್ರೀಮಂತ ಸನ್ಯಾಸಿ, ಕೋಟ್ಯಂತರ ರು. ಮೌಲ್ಯದ ಬೇನಾಮಿ ಆಸ್ತಿ ಮಾಡಿಕೊಂಡು ಮಠದಲ್ಲಿ ಕೋಮು ವಿರೋಧಿ ಚಟುವಟಿಕೆ ನಡೆಸುತ್ತಿದ್ದಾನೆ. ಇಂತಹವರ ಮೇಲೆ ಸೀಮೆಎಣ್ಣೆ ಸುರಿದು ಬಹಿರಂಗವಾಗಿ ಸುಡಬೇಕು ಎಂದರು.
ಆಸ್ತಿ ಮುಟ್ಟುಗೋಲಿಗೆ ಆಗ್ರಹ: ಧರ್ಮಪ್ಪ ಮಾತನಾಡಿ, ವಿವಿಧ ಸರ್ಕಾರಗಳಿಂದ ಭೂಮಿ ಪಡೆದು ಕೋಟ್ಯಂತರ ರು.  ವ್ಯವಹಾರ ನಡೆಸುತ್ತಿರುವ ವ್ಯಾಪಾರಿ ವೃತ್ತಿಯ ಕಳ್ಳಸ್ವಾಮಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು. ಪ್ರತಿಭಟನೆಯಲ್ಲಿ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಪುಟ್ಟರಾಜು, ಅರಸಪ್ಪ, ಸುಳುಗೋಡು ಮಂಜು, ಬಸವಯ್ಯ ಇತರರು ಪಾಲ್ಗೊಂಡಿದ್ದರು.
ಜಾವಗಲ್‌ನಲ್ಲೂ ಪ್ರತಿಭಟನೆ
ಜಾವಗಲ್: ಬಾಬಾ ರಾಮ್‌ದೇವ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಜಾವಗಲ್ ಹೋಬಳಿಯ ದಲಿತ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.  ಜಾವಗಲ್ ಉಪ ಪ್ರಧಾನ ಕರಿಯಪ್ಪ ಮಾತನಾಡಿ, ದಲಿತರ ಬಗ್ಗೆ ಅವಹೇಳನಕಾರಿಯಾದಂತಹ ಪದಪ್ರ ಯೋಗ ಮಾಡಿರುವಂತಹ ಶಿಕ್ಷೆ ನೀಡ ಬೇಕೆಂದು ಆಗ್ರಹಿಸಿದ ಅವರು, ಬಾಬಾ ರಾಮ್‌ದೇವ್ ಈ ರೀತಿಯ ಹೇಳಿಕೆಯಿಂದ ದಲಿತರಿಗೆ ಅವಮಾನವಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಗ್ರಾಪಂ ಸದಸ್ಯ ಲೋಹಿತ, ಗೋವಿಂದಪ್ಪ, ಮಹೇಶ, ಹನುಮಂತಪ್ಪ, ಮಂಜು, ಭಾನುಪ್ರಕಾಶ್, ರಾಜು, ಕೆಂಚಪ್ಪ, ರಾಜು, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಹಾಗೂ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿ ರಾಜಸ್ವ ನಿರೀಕ್ಷಕರ ಮೂಲಕ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement