ನೀರಿಗಾಗಿ ಪ್ರತಿಭಟನೆ
ಕ.ಪ್ರ.ವಾರ್ತೆ ಅರಕಲಗೂಡು ಏ.30
ತಾಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನೈಗೆರೆ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಏರ್ಪಟ್ಟಿದ್ದರೂ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಅಗತ್ಯ ಸೌಲಭ್ಯ ಕಲ್ಪಿಸದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿದ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.
ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಘೋಷಣೆ ಕೂಗಿದ ಅವರು, ಖಾಲಿ ಕೊಡಗಳನ್ನು ಪ್ರದರ್ಶಿಸಿದರು. ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ಪರಿಸ್ಥಿತಿಯ ಅರಿವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ವೇಳೆ ಸ್ಥಳದಲ್ಲಿದ್ದ ಪಿ.ಡಿ.ಒ ಯಾಲಕ್ಕಿಗೌಡ, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಆದರೆ, ಅದಕ್ಕೆ ಒಪ್ಪದ ಮಹಿಳೆಯರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಂ ಅವರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ, ಪ್ರತಿಭಟನೆ ಮುಂದುವರೆಸಿದರು.
ಮೊದಲಿಗೆ ಸಭೆಯಲ್ಲಿರುವುದಾಗಿ ತಿಳಿಸಿ, ಪಿಡಿಒ ಕಳುಹಿಸಿದ್ದೇನೆ ಎಂದಿದ್ದವರು ಕೊನೆಗೂ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಬಂದ ಶಿವರಾಂ ಅವರಿಗೆ ತಮ್ಮ ಮನವಿ ಅರ್ಪಿಸಿದರು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ತಕ್ಷಣದಿಂದಲೇ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಸರಬರಾಜು ಮಾಡಿಸುವ ವ್ಯವಸ್ಥೆ ಮಾಡಿಸುವ ಭರವಸೆ ಇತ್ತರು.ಈ ವೇಳೆ ತಾಲೂಕು ಕಚೇರಿಯ ಶಿರಸ್ತೇದಾರ್ ರಂಗರಾಜು, ಕಂದಾಯ ನಿರೀಕ್ಷಕ ಬಸವರಾಜು ಇದ್ದರು.