ಬಸವೇಶ್ವರ ಶರಣರಜಯಂತ್ಯುತ್ಸವ ನಾಳೆ
ಹಾಸನ: ಶ್ರೀ ವೀರಶೈವ ಸಂಘದ ವತಿಯಿಂದ ಮೇ 2ರಂದು ಬಸವೇಶ್ವರ ಜಯಂತ್ಯುತ್ಸವ ಆಚರಣೆ ನಡೆಸಲಾಗುವುದು ಎಂದ ಸಂಘದ ಅಧ್ಯಕ್ಷ ಬಿ.ಪಿ.ಐಸಾಮಿಗೌಡ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವವು ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮೇ 2ರಂದು ಬೆಳಿಗ್ಗೆ 6ರಿಂದ ದೇವತಾಮೂರ್ತಿಗಳಿಗೆ ರುದ್ರಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರುಗಲಿದ್ದು, 10 ಗಂಟೆಗೆ ಬಸವೇಶ್ವರ ಭಾವಚಿತ್ರದೊಡನೆ ರಥೋತ್ಸವ ನಡೆಯಲಿದೆ. ಇದೇ ವೇಳೆ ಕಲಾತಂಡಗಳಾದ ನಂದೀಧ್ವಜ, ಕರಡಿವಾದ್ಯ, ನೃತ್ಯ ತಂಡ ಹಾಗೂ ಇತರೆ ಕಲಾತಂಡದೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಜೊತೆಗೆ ಬೈಕ್ ರ್ಯಾಲಿ ಕೂಡ ನಡೆಯಲಿದೆ ಎಂದು ಹೇಳಿದರು. ಸಂಜೆ 5ಕ್ಕೆ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ದಾರವಾಡ ಶಿವಪುರದ ಮನಗುಂಡಿಯ ಬಸವೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ವೀರಶೈವ ಸಂಘದ ಕಾರ್ಯದರ್ಶಿ ಬಿ.ಎಂ. ಭುವನಾಕ್ಷ, ಕಟ್ಟಾಯ ಶಿವಕುಮಾರ್, ನಗರಸಭೆ ಮಾಜಿ ಸದಸ್ಯೆ ಅನ್ನಪೂರ್ಣ, ಯಡೂರು ಕುಮಾರ್, ಶೋಭಾಮಹೇಶ್ ಹಾಗೂ ಯತೀಶ್ ಇದ್ದರು.