ಹಾರಿ ಹೋಯ್ತು ಮನೆಯ ಮಾಳಿಗೆ!
ಅರಸೀಕೆರೆ: ಇತ್ತೀಚೆಗೆ ಗುಡುಗು, ಮಿಂಚು, ಸಿಡಿಲು ಆರ್ಭಟದೊಂದಿಗೆ ಬೀಸಿದ ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಕಣಕಟ್ಟೆ ಹೋಬಳಿ ಸುತ್ತಮುತ್ತ ವಿದ್ಯುತ್ ಕಂಬಗಳು, ಮನೆಗಳ ಮೇಲ್ಛಾವಣಿ ಜಖಂಗೊಂಡರೆ, ಮನೆಯ ಹೆಂಚುಗಳು ಹಾಗೂ ಶೀಟ್ಗಳು ಹಾರಿಹೋಗಿದ್ದು, ಫಲಭರಿತ ಬಾಳೆಯ ತೋಟ ನಾಶಗೊಂಡು ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ.
ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು, ಮೇಟಿಕುರ್ಕೆ, ದಿಬ್ಬೂರು, ಜೆ.ಸಿ.ಪುರ, ನರಸೀಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಜೆ ಆರಂಭವಾದ ಮಳೆ ಗಾಳಿ ತನ್ನ ರುದ್ರನರ್ತನ ಪ್ರದರ್ಶಿಸಿದೆ. ಇದರಿಂದಾಗಿ ಮಾಡಾಳು ಗ್ರಾಮದ ದಲಿತ ಕಾಲೋನಿಯ ಶಿವಣ್ಣ, ಮೂಡ್ಲಪ್ಪ, ಜಯಪ್ಪ ಅವರ ಮನೆಯ ಶೀಟ್ಗಳನ್ನು ಹಾಗೂ ನಾಗರಾಜ್ ಮತ್ತು ಎಂ.ಜಿ. ಮಲ್ಲಿಕಾರ್ಜುನ್ ಅವರ ಅಂಗಡಿಯ ಶೀಟ್ಗಳನ್ನು ಹಾರಿಹೋಗಿದ್ದು ಅಪಾರ ನಷ್ಟ ಉಂಟಾಗಿದೆ.
ಮಾಡಾಳು ಗೊಲ್ಲರಹಟ್ಟಿ ಬಳಿಯಿರುವ ಕೇರಳದ ಉದ್ಯಮಿಯೊಬ್ಬರ ತೆಂಗಿನ ನಾರಿನ ಘಟಕದ ಸಂಪೂರ್ಣ ಮೇಲ್ಛಾವಣಿಯನ್ನು ಕಿತ್ತೆಸೆದಿದೆ. ಅಲ್ಲದೇ, ಪಕ್ಕದಲ್ಲಿಯೇ ವಿದ್ಯುತ್ ಪರಿವರ್ತಕ ಇದ್ದ ವಿದ್ಯುತ್ ಕಂಬಗಳು ಅರ್ಧಕ್ಕೆ ತುಂಡಾಗಿ ಬಿದ್ದಿವೆ. ಅಲ್ಲದೆ ಬೇವಿನ ಹಾಗೂ ಮಾವಿನ ಮರಗಳ ಕೊಂಬೆಗಳು ಗಾಳಿಯ ರುದ್ರ ನರ್ತನಕ್ಕೆ ಸಿಲುಕಿ ತುಂಡಾಗಿ ಬಿದ್ದಿವೆ.
ರಂಗನಾಥ್ ಎಂಬುವರ ಎರೆಹುಳು ಗೊಬ್ಬರದ ಶೆಡ್ನ ನೂರಾರು ಹೆಂಚುಗಳು ಕೆಲಗೆ ಬಿದ್ದು ಪುಡಿ ಪುಡಿಯಾಗಿವೆ. ತಿಮ್ಮಯ್ಯ ಎಂಬುವರಿಗೆ ಸೇರಿದ ಫಲಭರಿತ ಬಾಳೆ ತೋಟ ನೆಲಕ್ಕೊರಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.