ಸಕಲೇಶಪುರ ತಾಲೂಕಲ್ಲಿ ಅತಿವೃಷ್ಟಿ: ರು. 9 ಕೋಟಿ ಹಾನಿ- ಜಿಲ್ಲಾಧಿಕಾರಿ
ಸಕಲೇಶಪುರ: ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ 9 ಕೋಟಿ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ಉಪವಿಭಾಗಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 90 ಕಿ.ಮಿ ಜಿ.ಪಂ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ದುಸ್ಥಿತಿಗೆ ಈಡಾಗಿದ್ದರೆ, ಯಸಳೂರು ಹೋಬಳಿಯ ಚಂಗಡಹಳ್ಳಿ,ಉಚ್ಚಂಗಿ,ಮಣಜೂರು ಸಮೀಪ ಭೂಕುಸಿತವಾಗುವ ಮುನ್ಸೋಚನೆ ಇದ್ದು ಭೂಕುಸಿತ ಸಂಭವಿಸಲಿರುವ ಮಠದಕೆರೆ ನೀಲಯ್ಯನವರ ಮನೆಯನ್ನು ಮಳೆಗಾಲ ಮುಗಿಯುವ ವರೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಬೆಳೆಹಾನಿಯ ವರದಿ ನಮ್ಮ ಕೈಸೇರಿಲ್ಲ ಎಂದರು.
ಪರಿಹಾರ: ಪಟ್ಟಣದಲ್ಲಿ 9 ಮನೆಗಳು ಭೂಕುಸಿತದಿಂದ ಹಾನಿಗೀಡಾಗಿದ್ದು ಇದರಲ್ಲಿ 5 ಮನೆಗಳಿಗೆ ಪರಿಹಾರ ನೀಡಲಾಗಿದೆ. ಉಳಿದ ಮನೆಗಳಿಗೆ ಇನ್ನೇರಡು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದರು. ಅತಿಯಾದ ಮಳೆಯಿಂದ ತಾಲೂಕಿನಲ್ಲಿ 14 ಜಾನುವಾರುಗಳು. 6 ಕುರಿಗಳು ಸಾವಿಗಿಡಾಗಿವೆ ಎಂದರು.
ಶಾಲೆ, ಕಾಲೇಜುಗಳಿಗೆ ರಜೆ: ಅಧಿಕ ಮಳೆಯಿಂದಾಗಿ ಶನಿವಾರ ಮತ್ತೆ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.