ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಮಟ್ಟದ ದೂರು ನಿವಾರಣ ಸಮಿತಿ ಸಭೆ: ಅನ್ಬುಕುಮಾರ್
ಹಾಸನ: ಮಹಿಳೆಯರು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣವಿರಬೇಕು. ಆಕಸ್ಮಿಕವಾಗಿ ಸಮಸ್ಯೆಗಳು ಉಂಟಾದಲ್ಲಿ ತಮ್ಮ ಇಲಾಖೆಯ ಅಧಿಕಾರಿಯವರಿಗೆ ದೂರು ನೀಡಿ ಬಗೆಹರಿಕೊಳ್ಳಬೇಕು, ಅಲ್ಲಿ ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಮಟ್ಟದ ದೂರು ನಿವಾರಣ ಸಮಿತಿಗೆ ದೂರು ಸಲ್ಲಿಸಿದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ದೂರು ನಿವಾರಣ ಸಮಿತಿ ರಚನೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ತಡೆಯಲು ಸರ್ಕಾರಿ ಆದೇಶದಂತೆ ಜಿಲ್ಲಾ ಮಟ್ಟದ ದೂರು ನಿವಾರಣ ಸಮಿತಿಯನ್ನು ಪಾರದರ್ಶಕವಾಗಿ ರಚಿಸುವ ಹಿನ್ನಲೆಯಲ್ಲಿ ಲಾಟರಿ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು. ಸಮಿತಿಯಲ್ಲಿ ಎಬಿಸಿಡಿ ಗ್ರೂಪ್ ತಲಾ ಇಬ್ಬರು ಸದಸ್ಯರಿರಬೇಕು ಕನಿಷ್ಠ ಐದು ಜನ ಮಹಿಳಾ ಸದಸ್ಯರಿರಬೇಕು ಎಂದರು. ಇಲಾಖೆಯ ಮಾದರಿ ಸಂಹಿತೆಯಂತೆ ಮಹಿಳೆಯರಿಗೆ ರಕ್ಷಣೆ ಒದಗಿಸುವುದು ಹಾಗೂ ಆರಾಮದಾಯಕ ವಾತಾವರಣ ನಿರ್ಮಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ. ಜಿಲ್ಲಾ ಮಟ್ಟದ ದೂರು ನಿವಾರಣ ಸಮಿತಿಗೆ ಬಂದ ದೂರು ಮುಚ್ಚುವ ಪ್ರಯತ್ನ ಮಾಡಬಾರದು. ಇದನ್ನು ಸಮಿತಿ ಸದಸ್ಯರು ಗಮನದಲ್ಲಿಟ್ಟು ಕಾರ್ಯನಿರ್ವಹಿಸುವಂತೆ ತಿಳಿಸಿದರು. ಗ್ರೂಪ್ ಎ ನಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಎಚ್.ಕೆ. ಲಲಿತಾದೇವಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಳಿನಿ, ಗ್ರೂಪ್ ಬಿ ನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಜೆ.ಬಿ. ವಿಜಯ ಲಕ್ಷ್ಮಿ, ಎಲ್.ವಿ. ಪಾಲಿಟೆಕ್ನಿಕ್ ಉಪನ್ಯಾಸಕಿ ರಾಧಾ, ಗ್ರೂಪ್ನಲ್ಲಿ ಸಹ ಗ್ರಂಥಾಪಾಲಕಿ ಲತಾ, ಬೆರಳಚ್ಚುಗಾರು ಎನ್. ಸುನಿತ ಹಾಗೂ ಗ್ರೂಪ್ ಡಿ ನಿಂದ ಪಿ. ದಕ್ಷಿಣಮೂರ್ತಿ ಮತ್ತು ಗಾಯಿತ್ರಿ ಆಯ್ಕೆಯಾದರು