ಒತ್ತಡರಹಿತ ಜೀವನಕ್ಕೆ ವ್ಯಕ್ತಿತ್ವ ವಿಕಸನ ತರಬೇತಿ ಅಗತ್ಯ
ಹಾಸನ: ನಮ್ಮ ಜೀವನದಲ್ಲಿ ಮಾನಸಿಕ ಒತ್ತಡ ಮತ್ತು ಕೆಲಸದಲ್ಲಿ ನಿರಾಸಕ್ತಿಗಳನ್ನು ತೊಲಗಿಸಲು ಯೋಗ ಧ್ಯಾನಗಳಿಂದ ಆನಂದದಾಯಕ ಜೀವನ ನಡೆಸಲು, ಒತ್ತಡ ರಹಿತ ಜೀವನ ಕ್ರಮ ನಡೆಸಲು ವ್ಯಕ್ತತ್ವ ವಿಕಸನ ತರಬೇತಿ ಅತ್ಯಾವಶ್ಯಕವಾಗಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಹೆಚ್.ಎ. ಗೋವಿಂದ್‌ರಾಜ್ ಶೆಟ್ಟರು ತಿಳಿಸಿದರು. ಮಲೆನಾಡು ಎಂಜಿನಿಯರ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ದೇಹ ಮತ್ತು ಮನಸ್ಸು ಹಾಗೂ ಆತ್ಮ ಶುದ್ಧಿಕರಣ ಗೊಳಿಸಲು ಹಾಗೂ ಆರೋಗ್ಯ ದಿಂದಿರಲು ಇಂತಹ ವ್ಯಕ್ತಿತ್ವ ವಿಕಸನ ಶಿಬಿರಗಳಿಂದ ಪ್ರಯೋಜನ ವಾಗಲಿದೆ. ಇದರ ಸೌಲಭ್ಯ ಗಳನ್ನು ಎಲ್ಲಾರು ಪಡೆಯಬೇಕು ಎಂದರು.
ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಿ: ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಜಯಂತ್ ಮಾತನಾಡಿ, ವ್ಯಕ್ತಿತ್ವ ವಿಕಸನ ಕಾರ್ಯ ಕ್ರಮವನ್ನು ಕಾಲೇಜಿನ ಟೆಕ್ಯೂಪ್ ವತಿಯಿಂದ ಏರ್ಪಡಿಸಲಾಗಿದೆ. ಈ ತರಬೇತಿ ಶಿಬಿರವು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸದಾ ಒತ್ತಡದಲ್ಲಿ ಇರುವ ನಾವು ಉತ್ತಮ ಕೆಲಸ ಮಾಡಲು ನೆಮ್ಮದಿ ಜೀವನ ನಡೆಸಲು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ವ್ಯಕ್ತಿ ವಿಕಸನ ಕಾರ್ಯಕ್ರಮ ಅಗತ್ಯವಾಗಿದೆ ಎಂದರು. ಸಮಾರಂಭದಲ್ಲಿ ಯೋಗಗುರು ಸುರೇಶ್ ಗುರೂಜಿ ಮಾತನಾಡಿ, ಒತ್ತಡ ರಹಿತ ಜೀವನ ಕ್ರಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಭರತ್ ನಾರಾಯಣ್ ಪ್ರಾರ್ಥನೆ ಮಾಡಿದರು. ಜಿ.ಜಿ. ಲೋಕೆಶ್ ಸ್ವಾಗತಿಸಿದರು. ಕಟ್ಟಾಯ ಶಿವಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಹ ಸಂಯೋಜಕ ಹೆಚ್.ಟಿ. ಜಯಶಂಕರ್ ಹಾಗೂ ತರಬೇತಿದಾರರು ಇದ್ದರು