ತೆರೆದ ಕೊಳವೆ ಬಾವಿ ಮುಚ್ಚಿಸಲು ಶಾಸಕ ಎ. ಮಂಜು ಸೂಚನೆ
ಅರಕಲಗೂಡು: ತಾಲೂಕಿನ ಕಣಿಯಾರು ಗ್ರಾಮದ ದಲಿತ ಕಾಲೋನಿ ಬಳಿ ಇರುವ ಅಂಗನವಾಡಿ ಸಮೀಪದ ಅನುಪಯುಕ್ತ ಕೊಳವೆ ಬಾವಿಯನ್ನು ಕೂಡಲೇ ಮುಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಇಲ್ಲಿನ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಕಣಿಯಾರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿದ್ದ ವರದಿಯನ್ನು ನೂತನ ಕೆಡಿಪಿ ಸದಸ್ಯ ಶಿವರಾಮಯ್ಯ ಅವರು ಪ್ರಸ್ತಾಪಿಸಿ ಪತ್ರಿಕಾ ವರದಿಯನ್ನು ಶಾಸಕರ ಮುಂದಿಟ್ಟರು.
ಅಧಿಕಾರಿಗಳೇ ಹೊಣೆ: ಗ್ರಾಮದಲ್ಲಿ ಅಂಗನವಾಡಿ ಸಮೀಪದಲ್ಲೇ ಕೊರೆದ ಕೊಳವೆ ಬಾವಿಯನ್ನು ಹಾಗೇ ಬಿಡಲಾಗಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ. ಎಲ್ಲೆಡೆ ಏನು ಘಟನೆ ಸಂಭವಿಸುತ್ತಿದೆ ಎಂದು ಗಮನಿಸಿದ್ದೀರಾ. ಕೂಡಲೇ ಕೊಳವೆ ಬಾವಿ ಮುಚ್ಚಿಸಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಅಂತಹ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು. ಇದೇ ವರದಿಗೆ ಸಂಬಂಧಿಸಿದಂತೆ ಕಣಿಯಾರು ಗ್ರಾಮದಲ್ಲಿ ಎಲ್ಲೆಂದರಲ್ಲಿ ನಿಯಮ ಮೀರಿ ಕೊಳವೆ ಬಾವಿ ತೋಡಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸಬೇಕು. ಸರ್ಕಾರಿ ಬೋರ್ವೆಲ್ಗಳ ಪಕ್ಕದಲ್ಲೇ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ತೋಡುತ್ತಿದ್ದಾಗ ಗ್ರಾಮ ಪಂಚಾಯಿತಿ ಪಿಡಿಓ ಗಳು ಏನುಮಾಡುತ್ತಿರುತ್ತಾರೆ ಎಂದು ಪ್ರಶ್ನಿಸಿದ ಅವರು ಅಂತಹ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ,ಮುಂದಿನ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶಿವರಾಂ ಅವರಿಗೆ ಸೂಚಿಸಿದರು.