ಅತಿವೃಷ್ಟಿ: ಪರಿಹಾರ ಕಾರ್ಯಕ್ಕೆ ಸೂಚನೆ
ಸಕಲೇಶಪುರ: ಅತಿವೃಷ್ಟಿಯಿಂದ ಹಾನಿಗೊಳಗಾಗುವ ಪ್ರದೇಶಗಳಿಗೆ ತಕ್ಷಣವೇ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಸೂಚಿಸಿದ್ದಾರೆ.
ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ 21 ಜಾನುವಾರುಗಳು ಸಾವಿಗೀಡಾಗಿವೆ. 300 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಇವುಗಳ ಬದಲಾಯಿಸಲು 30 ಹೆಚ್ಚುವರಿ ನೌಕರರನ್ನು ಕರೆಸಿಕೊಳ್ಳಲಾಗುತ್ತಿದೆ ಎಂದರು.
ಸಮೀಕ್ಷೆಗೆ ಸೂಚನೆ: ಸುಮಾರು 200 ಕಿ.ಮೀ ಜಿ.ಪಂ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಗಳು ದುಸ್ತಿತಿಗೆ ಈಡಾಗಿವೆ. ಕಾಫಿ ಹಾಗೂ ಕರಿಮೆಣಸಿನ ನಿಖರ ನಷ್ಟ ತಿಳಿಯಲು ಕಾಫಿ ಮತ್ತು ಏಲಕ್ಕಿ ಮಂಡಳಿಗಳಿಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಸರಾಸರಿಗಿಂತ 405 ಮಿ.ಮೀ ನಷ್ಟು ಅಧಿಕ ಮಳೆಯಾಗಿದೆ ಎಂದರು.
ಅಬಕಾರಿ ಇಲಾಖೆ 184 ಜನ ಕಳ್ಳಬಟ್ಟಿ ತಯಾರಕರನ್ನು ಗುರುತಿಸಿದ್ದು ಇವರಿಗೆ ಬದಲಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಸಿದ್ದಯ್ಯ,ಉಪಾಧ್ಯಕ್ಷೆ ಸುಮಂಗಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ, ಇಓ ಭಜಂತ್ರಿ ಇತರರು ಇದ್ದರು.