ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಸ ವಿಲೇವಾರಿಗೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 6 Aug 2014, 12:55 pm

ಹಾಸನ: ಹಾಸನ ಗೊರೂರು ರಸ್ತೆಯ ಸಂತೇಮೈದಾನದಲ್ಲಿ ಕಸ ಸಂಗ್ರಹಣೆ ಅವೈಜ್ಞಾನಿಕವಾಗಿದ್ದು, ಕೂಡಲೇ ಕಸ ವಿಲೇವಾರಿ ಮಾಡುವಂತೆ ಆಗ್ರಹಿಸಿ ಹಾಸನಾಂಬ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹೌಸಿಂಗ್ ಬೋರ್ಡ್ ನಿವಾಸಿಗಳು ಮಂಗಳವಾರ ರಸ್ತೆ ತಡೆ ನಡೆಸಿದರು.
ಗೊರೂರು ರಸ್ತೆಯಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ, ನಂತರ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ಗೆ ಮನವಿ ನೀಡಿದರು.
ನ್ಯಾಯಾಲಯದ ಆದೇಶ ಹಾಗೂ ಸುಗ್ರೀವಾಜ್ಞೆಯ ಅನುಸಾರ ನಗರದ ತ್ಯಾಜ್ಯವನ್ನು 5 ಕಿಮೀ ವ್ಯಾಪ್ತಿಯ ಹೊರಗಡೆ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಹಾಸನ ನಗರಸಭೆ ನ್ಯಾಯಾಲಯದ ಸುಗ್ರೀವಾಜ್ಞೆ ಉಲ್ಲಂಘಿಸಿ ನಗರದ ಗೊರೂರು ರಸ್ತೆಯ ಆಸು ಪಾಸಿನಲ್ಲಿ ಕಸ ಸಂಗ್ರಹಿಸಿ ನಗರದಲ್ಲಿ ಮಾರಕ ರೋಗಗಳ ಉತ್ಪಾದಕ ಕೇಂದ್ರವನ್ನಾಗಿ ಮಾಡಿದೆ ಎಂದು ಆರೋಪಿಸಿದರು.
ಬಡಾವಣೆಯ ಪಕ್ಕದಲ್ಲೆ ಬಿಟ್ಟಗೌಡನಹಳ್ಳಿ ಸ್ಮಶಾನ ಇದ್ದು, ಇಲ್ಲಿ ಮೃತ ದೇಹಗಳನ್ನು ಸುಡುವುದರಿಂದ ಕೆಟ್ಟ ವಾಸನೆ ಹಾಗೂ ಹೊಗೆ ಹರಡಿ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಇಲ್ಲಿ ಜೀವನ ಸಾಗಿಸುವುದೆ ಕಷ್ಟಕರವಾಗಿದೆ ಎಂದು ದೂರಿದರು.
ನಗರಸಭೆಯು ಗೊರೂರು ರಸ್ತೆಯ ಎರಡು ಬದಿಯಲ್ಲಿ ಕಸವನ್ನು ಅವೈಜ್ಞಾನಿಕವಾಗಿ ಸಂಗ್ರಹಿಸಿದ್ದು, ಇದರಿಂದ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ ಎಂದು ಕಿಡಿಕಾರಿದರು. ಬಡಾವಾಣೆಯಲ್ಲಿರುವ ಮ್ಯಾನ್ ಹೋಲ್ಗಳು ಸಂಪೂರ್ಣವಾಗಿ ಕಟ್ಟಿಕೊಂಡಿದ್ದು, ತೆರೆದಿವೆ. ಈ ಬಗ್ಗೆ ಹೌಸಿಂಗ್ ಬೋರ್ಡ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ನಿವಾಸಿಗಳು ಹಾಗೂ ಹಾಸನಾಂಬೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷೆ ವಾಣಿ, ಪರಮೇಶ್, ಗೋಪಾಲಕೃಷ್ಣ, ಖಜಾಂಚಿ ವೀರಭದ್ರ, ಶಿವಣ್ಣ, ಲಕ್ಷ್ಮೀಶ್ ಇದ್ದರು.

ನಗರಸಭೆ ಆಯುಕ್ತರು ಹಾಗೂ ಹೌಸಿಂಗ್ ಅಧಿಕಾರಿಗಳನ್ನು ಬಡಾವಣೆಗೆ ಕರೆತಂದು ಪರಿಶೀಲಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಸಲಾಗುವುದು.
ಟಿ ವಿ. ಅನ್ಬುಕುಮಾರ್, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement