ನೀರಿನ ಸಮಸ್ಯೆಗೆ ಆಡಳಿತ ಸ್ಪಂದಿಸುತ್ತಿಲ್ಲ: ಆರೋಪ
ಅರಸೀಕೆರೆ: ಕಳೆದ 18 ತಿಂಗಳಿನಿಂದ ರದ್ದಾಗಿದ್ದ ಜನಸ್ಪಂದನ ಸಭೆ ಇತ್ತೀಚೆಗೆ ಕಣಕಟ್ಟೆ ಗ್ರಾಮದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ತಹಸಾಲ್ದಾರ್ ನಟರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ಉದ್ಘಾಟಿಸಿ, ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನಸ್ಪಂದನಾ ಕಾರ್ಯಕ್ರಮ ಸಾರ್ವಜನಿಕ ಹಿತದೃಷ್ಟಿವುಳ್ಳದಾಗಿದ್ದು, ಜನರು ತಮ್ಮ ಸಮಸ್ಯೆಗಳನ್ನು ಹೇಳಿದರೆ ಅದಕ್ಕೆ ಅಧಿಕಾರಿಗಳು ಉತ್ತರ ನೀಡಲಿದ್ದಾರೆ ಎಂದು ಹೇಳುತ್ತಿದ್ದಂತೆ ಜನರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.
ನೀರಿಗಾಗಿ ಅಲೆಯುವ ಸ್ಥಿತಿ: ಹೋಬಳಿಯ ಆನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ, ತಾಲೂಕು ಆಡಳಿತವಾಗಲೀ, ಗ್ರಾಮ ಪಂಚಾಯಿತಿ ಕೇಂದ್ರ ವಾಗಲಿ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದರಿಂದ ಕುಡಿಯುವ ನೀರಿಗಾಗಿ ಜನತೆ ಖಾಲಿ ಬಿಂದಿಗೆ ಹಿಡಿದುಕೊಂಡು ಅಲೆಯುವ ಪರಿಸ್ಥಿತಿ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಲಿಂಗೇಗೌಡ ಕೊಳವೆ ಬಾವಿ ಕೊರೆಸಲು ನಮ್ಮ ಅಭ್ಯಂತರವಿಲ್ಲ. ಆದರೆ ಕೆಲವರು ಕುಡಿಯುವ ನೀರಿನ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ವಿನಾ ಕಾರಣ ಅಧಿಕಾರಿಗಳ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿ ಲೋಕಾಯುಕ್ತ ದೂರು ನೀಡಿದ್ದಾರೆ ಎಂದು ಟೀಕಿಸಿದರು.
ಸುಳ್ಳು ಆರೋಪ: ಕೊಳವೆ ಬಾವಿ ಕೊರೆದಿದ್ದು, 1,050 ಅಡಿ, ಆದರೆ ನೀರು ಬಂದಿಲ್ಲ. ಆದರೆ ಕೇವಲ 300 ಅಡಿ ಕೊರೆದು 800 ಅಡಿ ಕೊರೆದಿರುವುದಾಗಿ ಹೇಳಿ ಹಣ ಲಪಟಾಯಿಸಿದ್ದಾರೆ ಎಂದು ಕೆಲವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಏನು ಮಾಡುವುದು ನೀವೇ ಇದಕ್ಕೆ ಉತ್ತರಿಸಿ ಎಂದರು.
ತಾಪಂ, ಕಾರ್ಯನಿರ್ವಹಣಾಧಿಕಾರಿ ಟಿ.ಎನ್. ಮೂರ್ತಿ, ಜಿ.ಪಂ ಸದಸ್ಯ ಪಾರ್ವತಮ್ಮ, ತಾ.ಪಂ ಅಧ್ಯಕ್ಷ ಲಕ್ಷ್ಮಣ, ಸದಸ್ಯರಾದ ದಿನೇಶ್, ನಂಜುಂಡಪ್ಪ, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.