ಪತ್ರಕರ್ತರು ಭ್ರಷ್ಟರನ್ನು ಬೆಂಬಲಿಸದಿರಲಿ
ಹಾಸನ: ಜನ ವಿರೋಧಿ ಪತ್ರಕತ್ರರು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವುದು ವ್ಯತಿರಿಕ್ತವಾಗಿರುವ ಪರಿಸ್ಥಿತಿಗೆ ನಿದರ್ಶನವಾಗಿದೆ ಎಂದು ಮೈಸೂರಿನ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕೈಗಾರಿಕಾಭಿವೃದ್ಧಿ ಪ್ರದೇಶದ ಪವನಪುತ್ರ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಜಗತ್ತಿನ ಯಾವುದೇ ಮೂಲೆಯಲ್ಲಿನ ಬೆಳವಣಿಗೆಯನ್ನು ಕ್ಷಣಾರ್ಧದಲ್ಲಿ ಸುದ್ದಿಯಾಗಿ ನೀಡಬಲ್ಲ ಸಾಮರ್ಥ್ಯವುಳ್ಳ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಕಣ್ಮರೆಯಾಗಿದೆ ಎಂದು ವಿಷಾದಿಸಿದರು.
ಭ್ರಷ್ಟರನ್ನು ಬೆಂಬಲಿಸಬೇಡಿ: ಜನ ವಿರೋಧಿ ಜನಪ್ರತಿನಿಧಿಗಳು, ಭ್ರಷ್ಟ ಅಧಿಕಾರಿಗಳು ಹಾಗೂ ಲಾಭಕೋರ ಉದ್ದಿಮೆದಾರರ ಆಮಿಷಕ್ಕೆ ಒಳಗಾಗಿ ಅಂತಹವರನ್ನು ಬೆಂಬಲಿಸುವ ಪತ್ರಕರ್ತರೂ ಸಹ ಜನ ವಿರೋಧಿ ಪತ್ರಕರ್ತರೇ ಆಗುತ್ತಾರೆ.
ಪತ್ರಿಕೋದ್ಯಮಕ್ಕೆ ಅಂಟುತ್ತಿರುವ ಇಂತಹ ಕಳಂಕವನ್ನು ತೊಳೆಯಲು ಹಾಗೂ ಇಂತಹ ಜನ ವಿರೋಧಿಗಳ ಕುರಿತು ಜನರಿಗೂ ತಿಳಿವಳಿಕೆ ನೀಡಲು ಪ್ರತಿಯೊಬ್ಬ ಪತ್ರಕರ್ತನೂ ಸ್ವಯಂ ನಿಧಾರ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಮಾರಂಭ ಉದ್ಘಾಟಿಸಿದ ಅರಕಲಗೂಡು ಶಾಸಕ ಎ. ಮಂಜು ಮಾತನಾಡಿ, ತಪ್ಪು ಮಾಡಿದವರನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ರಾಜಕಾರಣಿಗಳು ಮೊದಲು ಬಿಡಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಓ ಉಪೇಂದ್ರ ಪ್ರತಾಪ್ ಸಿಂಗ್ ಮಾತನಾಡಿದರು. ನಗರಸಭಾಧ್ಯಕ್ಷರಾದ ಶ್ರೀವಿದ್ಯಾ ಇದ್ದರು.
ಸನ್ಮಾನ: ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಹಾಸನದ ಯು.ಉದಯ್ ಹಾಗೂ ಬನವಾಸೆ ಮಂಜು, ಬಸವಾಪಟ್ಟಣದ ಜಯಕುಮಾರ್, ಬೇಲೂರಿನ ಡಿ.ಬಿ. ಮೋಹನ್ ಕುಮಾರ್, ಅರಸೀಕೆರೆಯ ಎಚ್.ಡಿ. ಸೀತಾರಾಂ, ಚನ್ನರಾಯಪಟ್ಟಣದ ಸಿದ್ಧರಾಜು ಮತ್ತು ಹಾಸನದ ಹಿರಿಯ ಪುಟ ವಿನ್ಯಾಸಕ ಸಿ.ಪಿ. ಸೋಮಶೇಖರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.