ವಿದ್ಯುತ್ ಸಮಸ್ಯೆ ಪರಿಹರಿಸಲು ಮನವಿ
ಚನ್ನರಾಯಪಟ್ಟಣ: ಗ್ರಾಮಾಂತರ ಪ್ರದೇಶದ ಜನತೆಗೆ ಸರ್ಕಾರ ನಿಗದಿ ಮಾಡಿರುವ ಸಮಯದಷ್ಟು ವಿದ್ಯುತ್ ನೀಡಲು ಸಾಧ್ಯವಾಗದ ಕಾರಣ ತಾಲೂಕಿನ ಜನತೆ ತಮ್ಮ ಮೇಲೆ ಒತ್ತಡ ಹಾಕುತ್ತಿದ್ದು ಸಮಸ್ಯೆ ಬಗೆಹರಿಸುವಂತೆ ಇಂಧನ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಚೆಸ್ಕಾಂ ಇಲಾಖೆ ವತಿಯಿಂದ ನಿರಂತರ 24 ಗಂಟೆಗಳ ಗ್ರಾಹಕರ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ ಸರ್ಕಾರ ನಿಗದಿ ಮಾಡಿರುವ ಅವಧಿಯಷ್ಟು ವಿದ್ಯುತ್ ನೀಡುವಷ್ಟು ವಿದ್ಯುತ್ ಸರಬರಾಜಿಲ್ಲದ ಕಾರಣ ಗ್ರಾಮೀಣ ಭಾಗದ ರೈತರು ದೂರು ನೀಡುತ್ತಿರುವ ಬಗ್ಗೆ ಇಂಧನ ಸಚಿವರ ಜತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಾಮಗಾರಿ ವಿಳಂಬ: ತಾಲೂಕಿನಲ್ಲಿ 70 ಕೋಟಿ ವೆಚ್ಚದಲ್ಲಿ ಗ್ರಾಮಾಂತರ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಂಡು ಹಲವು ದಿನಗಳು ಕಳೆದರೂ ಕಾಮಗಾರಿ ವಿಳಂಬವಾಗುತ್ತಿದ್ದು, ಈ ಬಗ್ಗೆ ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.