ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಅರಸೀಕೆರೆ. ಆ 6
ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುವ ಮೂಲಕ ಸೆಸ್ಕಾಂ ಇಲಾಖೆ ಬೇಜವಾಬ್ದಾರಿ ವರ್ತನೆ ಪರಿಣಾಮ ನೂರಾರು ಗ್ರಾಮಗಳ ಕೊಳವೆ ಬಾವಿಗಳ ಪಂಪುಸೆಟ್ಗಳು ಸುಟ್ಟು ಹೋಗುತ್ತಿವೆ. ಜನರು ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಇನ್ನಿತರ ಸಮಸ್ಯೆ ಗಳನ್ನು ಅನುಭವಿಸುತ್ತಿರುವ ಕಾರಣ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಸೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮೆರವಣಿಗೆ: ಪಟ್ಟಣದ ಹಳೇ ಆರ್ಎಂಎಸ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಬೆಳಿಗ್ಗೆ ತಾಲೂಕು ಅಧ್ಯಕ್ಷ ಹರಳಕಟ್ಟಾ ರಮೇಶ್ ಹಾಗೂ ರೈತ ಮೋರ್ಚಾ ಅಧ್ಯಕ್ಷ ಮಲ್ಲೇನಹಳ್ಳಿ ಹೊಳೆಯಪ್ಪ ನೇತೃತ್ವ ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿದರು.
ಸಿಎಂ ವಿರುದ್ಧ ಘೋಷಣೆ: ಪಿಪಿ ವೃತ್ತಕ್ಕೆ ಆಗಮಿಸಿದ ಪ್ರತಿಭಟನಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆಯ ಸಂಚಾರಕ್ಕೆ
ಅಡ್ಡಿಯುಂಟು ಮಾಡಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಸೆಸ್ಕಾಂ ಕಚೇರಿ ಆವರಣಕ್ಕೆ ಬಂದು ಜಮಾಯಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಿ.ವಿ.ಬಸವರಾಜು ಮಾತನಾಡಿದರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದೇವರಾಜು, ಸಮರ್ಪಕ ಉತ್ತರ ನೀಡದ ಕಾರಣ ತೀವ್ರ ಆಕ್ರೋಶಗೊಂಡ ಕಾರ್ಯಕರ್ತರು ಅಧಿಕಾರಿಗಳಿಗೆ ದಿಗ್ಭಂದನ ಮಾಡಿ ಸ್ಥಳಕ್ಕೆ ಸಹಾಯಕ ಅಭಿಯಂತರರು ಬಂದು ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿದರು.
ಪೊಲೀಸರ ಮಧ್ಯ ಪ್ರವೇಶ: ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ನಂದಕುಮಾರ್, ಎಎಸ್ಐ ಲಕ್ಷ್ಮಣ್, ಗೋಪಾಲ್ ಮತ್ತು ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಮೋರ್ಚಾ ಮುಖಂಡ ವಿಜಯ್, ತಾಲೂಕು ರೈತಮೋರ್ಚಾ ಅಧ್ಯಕ್ಷ ಮಲ್ಲೇನಹಳ್ಳಿ ಜಿ.ಹೊಳೆಯಪ್ಪ, ತಾಲೂಕು ಕಾರ್ಯದರ್ಶಿ ಜಿ.ಜಿ.ಲೋಕೇಶ್, ನಗರ ಅಧ್ಯಕ್ಷ ಕೆ.ವಿ.ಹಿರಿಯಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಚೇತನಕುಮಾರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ತಾ ಅಧ್ಯಕ್ಷ ವೈ.ಕೆ.ದೇವರಾಜ್, ಎಪಿಎಂಸಿ ಸದಸ್ಯ ಗಂಗಾಧರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಅಧಿಕಾರಿ ಪ್ರತಿಕ್ರಿಯೆ: ಮನವಿ ಸ್ವೀಕರಿಸಿ ಸೆಸ್ಕಾಂ ಎಇಇ ದೇವರಾಜು ಮಾತನಾಡಿ, ಮಳೆ ಮತ್ತು ಸಿಡಿಲಿಗೆ ಸುಟ್ಟು ಹೋಗಿದ್ದ ವಿದ್ಯುತ್ ಪರಿವರ್ತಕಗಳ ಪೈಕಿ ಶೇ.50 ರಷ್ಟು ಪರಿವರ್ತಕಗಳನ್ನು ಈಗಾಗಲೇ ಬದಲಿಸಲಾಗಿದೆ. ಅಲ್ಲದೆ ಹೊಸದಾಗಿ ಲೈನ್ಮನ್ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸಲಾಗುವುದು ಎಂದು ಹೇಳಿದರು.