ಹೊಳೆನರಸೀಪುರ: ನಿರಂತರ ಶೋಷಣೆ, ದಿಕ್ಕು ತಪ್ಪಿದ ಬದುಕು ಮತ್ತು ತಿಳಿವಳಿಕೆಯಿಲ್ಲದ ಜೀವನದಿಂದ ಆದಿಜಾಂಬವ ಜನಾಂಗವು ಹೊರಬಂದು ತಮ್ಮ ಸಾಮಾಜಿಕ ಭದ್ರತೆಗಾಗಿ ಒಗ್ಗಟ್ಟು ಪ್ರದರ್ಶಿಸಬೇಕಾದ ಅವಶ್ಯಕತೆ ಇದೆ ಎಂದು ಮೈಸೂರು- ಚಾಮರಾಜನಗರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ ಇಲ್ಲಿ ಕರೆ ನೀಡಿದರು.
ಪ್ರಾತಿನಿಧ್ಯ ಸಿಗುತ್ತಿಲ್ಲ: ಈ ರಾಜ್ಯದಲ್ಲಿ ಹಿಂದಿನಿಂದಲೂ ಆದಿಜಾಂಬವ ಜನಾಂಗಕ್ಕೆ ನಿಜಕ್ಕೂ ಸಿಗಬೇಕಾದ ಪ್ರಾತಿನಿಧ್ಯ ಇಂದಿಗೂ ಸಿಕ್ಕಿಲ್ಲ. ಈ ಜನಾಂಗದವರಲ್ಲಿ ರಾಜಕೀಯ ಪ್ರಬುದ್ಧತೆ ಇನ್ನೂ ಬಂದಿಲ್ಲದ ಕಾರಣ ಇಂದಿಗೂ ಸರ್ವಾಂಗೀಣ ಒಗ್ಗಟ್ಟು ಪ್ರದರ್ಶಿಸುವಲ್ಲಿ ಜನಾಂಗವು ಹಿಂದೆ ಬಿದ್ದಿದೆ. ಜನಾಂಗದ ಹಿರಿಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮವಹಿಸುವಂತೆ ಕರೆ ನೀಡಿದರು.