ಕ.ಪ್ರ.ವಾರ್ತೆ, ಚನ್ನರಾಯಪಟ್ಟಣ. ಜೂ 6
ಸರ್ಕಾರದ ಇಲಾಖೆಗಳಲ್ಲಿ ಸಿಗುವ ಮಾಹಿತಿಯನ್ನು ಪಡೆದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಅತ್ಯುಪಯುಕ್ತವಾಗಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಚನ್ನರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವರಾಮೇಗೌಡ ಅವರು ತಿಳಿಸಿದರು.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶ್ರೀಗಂಧ ಸೇವಾ ಸಂಸ್ಥೆ, ಚನ್ನರಾಯಪಟ್ಟಣದ ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ಗ್ರಾಮ ಪಂಚಾಯ್ತಿ ಗೌಡಗೆರೆ ಚನ್ನರಾಯಪಟ್ಟಣ ತಾಲೂಕುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಜೋಗಿಪುರ ಅಂಗನವಾಡಿ ಕೇಂದ್ರದ ಆವರಣದಲ್ಲಿ ನಡೆದ ಮಾಹಿತಿ ಹಕ್ಕು ಕಾಯಿದೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ತಿಂಗಳೊಳಗೆ ಮಾಹಿತಿ: ಜನಸಾಮಾನ್ಯರು ತಮ್ಮ ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆಯಲು ಅರ್ಜಿಯ ಜೊತೆ 10 ರು. ಮೌಲ್ಯದ ಪೋಸ್ಟಲ್ ಆರ್ಡರ್ನೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ 30 ದಿನಗಳೊಳಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿಗಧಿತ ಅವಧಿಯಲ್ಲಿ ಮಾಹಿತಿ ನೀಡದಿದ್ದಲ್ಲಿ ಅಧಿಕಾರಿಗೆ ದಂಡವಿಧಿಸಲಾಗುವುದು ಎಂದರು.
ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎನ್.ಗಂಗಪ್ಪ ಗೌಡ ಅವರು ಮಾತನಾಡಿ, ಈ ಕಾಯ್ದೆಯಡಿಯಲ್ಲಿ ಎಲ್ಲಾ ಇಲಾಖೆಗಳು ಬರುವುದರಿಂದ ಹಾಗೂ ಇಲಾಖೆಗಳು ತಮ್ಮ-ತಮ್ಮ ಇಲಾಖೆಗಳಲ್ಲಿನ ಸೂಚನಾ ಫಲಕಗಳಲ್ಲಿ ಕಚೇರಿಯಲ್ಲಿ ದೊರೆಯುವ ಸೇವಾ ವಿವರಗಳನ್ನು ನಮೂದಿಸಿರುವುದನ್ನು ಸಹ ಜನಸಾಮಾನ್ಯರು ಕಚೇರಿಗಳಲ್ಲಿ ಕಾಣಬಹುದು ಎಂದರು.
ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಸದಸ್ಯೆ ಭಾಗ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌಡಗೆರೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಇಬ್ರಾಹಿಂ, ಶಾಲಾ ಶಿಕ್ಷಕಿ ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.
ನಂದೀಪುರ ಅಂಗನವಾಡಿ ಕಾರ್ಯಕರ್ತೆ ಪುಟ್ಟಗೌರಮ್ಮ ಸ್ವಾಗತಿಸಿ, ಇಂದಿರಮ್ಮ ವಂದಿಸಿದರು. ಇದೇ ಸಂದರ್ಬದಲ್ಲಿ ಮಹಿಳೆಯರಿಗೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜನಸಾಮಾನ್ಯರು ತಮ್ಮ ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆಯಲು ಅರ್ಜಿಯ ಜೊತೆ 10 ರು. ಮೌಲ್ಯದ ಪೋಸ್ಟಲ್ ಆರ್ಡರ್ನೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ 30 ದಿನಗಳೊಳಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಶಿವರಾಮೇಗೌಡ