ಅರಸೀಕೆರೆ: ಸಂಸ್ಕಾರ ಭಾರತಿಯ ಅರಸೀಕೆರೆ ಶಾಖೆ ವತಿಯಿಂದ ಖ್ಯಾತ ಹಿರಿಯ ತಬಲ ಕಲಾವಿದ ದಿಬ್ಬೂರು ನಿಂಗಪ್ಪ ಅವರನ್ನು ಗುರುವಂದನ ಕಾರ್ಯಕ್ರಮದ ಅಂಗವಾಗಿ ದಿಬ್ಬೂರಿನ ಅವರ ಸ್ವಗೃಹದಲ್ಲಿ ಶಾಲು ಹೊದಿಸಿ ನಗದು ಪುರಸ್ಕಾರ ನೀಡಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಸಂಸ್ಕಾರ ಭಾರತೀಯ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿನ ಪಾತ್ರ ಮಹತ್ವಪೂರ್ಣ. ತಂದೆ, ತಾಯಿಯ ನಂತರ ಗುರುವಿಗೆ ಅಗ್ರ ಸ್ಥಾನ. ಸಮಾಜವು ಸತ್ಪಥದಲ್ಲಿ ನಡೆಯುವಂತೆ ಉತ್ತಮ ಸಂಸ್ಕಾರವನ್ನು ನೀಡಬೇಕಾದದ್ದು ಗುರುಗಳ ಆದ್ಯ ಕರ್ತವ್ಯ ಎಂದರು.
ಹಾರ್ಮೋನಿಯಂ ವಿದ್ವಾಂಸ: ಉಪನ್ಯಾಸಕ ಪ್ರಕಾಶ್ ಕಲಾವಿದ ದಿಬ್ಬೂರು ನಿಂಗಪ್ಪನವರ ಪರಿಚಯ ಮಾಡಿ 75 ವರ್ಷದ ವಯೋವೃದ್ಧರಾದ ದಿಬ್ಬೂರು ನಿಂಗಪ್ಪನವರು ತಬಲ ಹಾಗೂ ಹಾರ್ಮೋನಿಯಂ ವಿದ್ವಾಂಸರಾಗಿದ್ದು, ತಮ್ಮ 20 ನೇ ವಯಸ್ಸಿನಿಂದಲೇ ಈ ಕಲೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಕಲಾವಿದ ನಿಂಗಪ್ಪ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಕಲೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಗ್ರಾಮೀಣ ಕಲೆ ನಶಿಸಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ತಮ್ಮ ಗ್ರಾಮಕ್ಕೆ ಆಗಮಿಸಿ ತಮ್ಮ ಮನೆ ಬಾಗಿಲಿನಲ್ಲಿ ತಮ್ಮನ್ನು ಗೌರವಿಸಿದ ಸಂಸ್ಕಾರ ಭಾರತಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು. ಸಮಾರಂಭದಲ್ಲಿ ರಂಗನಾಥ್, ಮೋಹನ್ ಕುಮಾರ್, ಗಾಯತ್ರಿ, ಯೋಗೀಶ್, ಸುನಂದ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಾಧ್ಯಕ್ಷರಾದ ವಿ.ಎಂ.ಭಟ್ ಸ್ವಾಗತಿಸಿದರು. ಹರೀಶ್ ಕುಮಾರ್ ವಂದಿಸಿ, ಕಾಮೇಶ್ವರಿ ಭಟ್ ನಿರೂಪಿಸಿದರು.
ಉದ್ಯೋಗಕ್ಕಾಗಿ ನೇರ ಸಂದರ್ಶನ
ಹಾಸನ: ನಗರದ ಎಲ್ವಿ ಪಾಲಿಟೆಕ್ನಿಕ್ನಲ್ಲಿ ಆ. 8 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಡಿಪ್ಲೊಮಾ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಚೆನ್ನೈನ ಮಾಂಡೊ ಆಟೋಮೋಟಿವ್ ಇಂಡಿಯಾ ಲಿ. ಸಂಸ್ಥೆ ನೇರ ಸಂದರ್ಶನ ಹಮ್ಮಿಕೊಂಡಿದೆ. 2014 ನೇ ಸಾಲಿನಲ್ಲಿ ಡಿಪ್ಲೊಮಾ ವ್ಯಾಸಂಗ ಮುಗಿಸಿ ಶೇ.70 ಅಂಕಗಳನ್ನು ಗಳಿಸಿರಬೇಕು. ಆಸಕ್ತರು ಸ್ವವಿವರ, ಭಾವಚಿತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯೊಂದಿಗೆ ಹಾಜರಾಗುವಂತೆ ಕೋರಲಾಗಿದೆ.
ಅಕ್ಕಿ ಬಹಿರಂಗ ಹರಾಜು
ಹಾಸನ: ಸರ್ಕಾರದ ವಶದಲ್ಲಿರುವ ಅಕ್ಕಿಯನ್ನು ಸಾರ್ವಜನಿಕವಾಗಿ ಆ. 8ರಂದು ಬೆಳಗ್ಗೆ 11 ಗಂಟೆಗೆ ನಗರದ ತಣ್ಣೀರುಹಳ್ಳದ ಬಳಿ ಇರುವ ಶ್ರೀ ಗುರು ನ್ಯೂಟೆಕ್ ಅಕ್ಕಿ ಗಿರಣಿ ಆವರಣದಲ್ಲಿ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ 608 ಚೀಲ ಅಂದಾಜು 304 ಕ್ವಿಂಟಲ್ ಅಕ್ಕಿ ಹರಾಜು ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ತಹಸೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು.