ಹಾಸನ: ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತ ಬುಧವಾರ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವ ಭರವಸೆಯನ್ನು ನೀಡಿತು.
ಹೌಸಿಂಗ್ ಬೋರ್ಡ್ ನಿವಾಸಿಗಳು ಆ.5ರಂದು ನಗರದಲ್ಲಿ ಪ್ರತಿಭಟನೆ ನಡೆಸಿ ಕಸ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮನವಿ ನೀಡಿದ್ದರು.
ಸ್ಥಳ ಪರಿಶೀಲನೆ: ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತದವತಿಯಿಂದ ಉಪ ವಿಭಾಗಾಧಿಖಾರಿ ಶರತ್, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್ ಆನಂದ್, ಯೋಜನಾಧಿಕಾರಿ ಪಲ್ಲವಿ, ಕೆಎಚ್ಬಿ ಇಲಾಖೆಯ ಪಂಚಾಕ್ಷರಿ, ಸಹಾಯಕ ಅಭಿಯಂತರ ಶಿವಲಿಂಗೇಗೌಡ ಹಾಗೂ ಇತರರು ಬಂದು ನಗರದ ಗೊರೂರು ರಸ್ತೆಯಲ್ಲಿ ಇರುವ ರಾಶಿ ಹಾಕಿದ್ದ ಕಸವನ್ನು ವೀಕ್ಷಿಸಿದರು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಗರದ ತ್ಯಾಜ್ಯವನ್ನು 5 ಕಿಮಿ ಹೊರಗಡೆ ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಆದರೆ ನಗರಸಭೆಯವರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಗೊರೂರು ರಸ್ತೆ ಬಳಿ ಎಸೆಯುತ್ತಿರುವುದರಿಂದ ಬೆಟ್ಟವನ್ನೇ ನಿರ್ಮಿಸಿ ಮಾರಕ ರೋಗಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡಿದ್ದಾರೆ ನಿವಾಸಿಗಳು ಆರೋಪಿಸಿದರು.
ಸಮಸ್ಯೆ ಪರಿಹರಿಸಲು ಕ್ರಮ: ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಆದೇಶದಂತೆ ನಾವು ಸ್ಥಳ ಪರಿಶೀಲನೆ ನಡೆಸಿದಾಗ ಇಲ್ಲಿ ನಾನಾ ಸಮಸ್ಯೆಗಳು ಇರುವುದು ಕಂಡು ಬಂದಿದೆ.
ಎಲ್ಲಾ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗುವುದು. ನಂತರ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಸಭೆ ಮಾಡುವ ಮೂಲಕ ಸಮಸ್ಯೆಯನ್ನು ಒಂದೊಂದಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶರತ್ ತಿಳಿಸಿದರು.
ಈ ಸಂದರ್ಭದಲ್ಲಿ ಹಾಸನಾಂಭ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಾಲ್, ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ರೇವಣ್ಣ, ಪರಮೇಶ್, ಸಂತೋಷ್, ವಾಣಿ ವೆಂಕಟೇಶ್ ಇತರರು ಇದ್ದರು.