ಎ.ರಾಘವೇಂದ್ರ ಹೊಳ್ಳ.
ಕನ್ನಡಪ್ರಭವಾರ್ತೆ, ಬೇಲೂರು , ಆ.6
ಕಳೆದ 4 ದಿನದಿಂದ ಸುರಿಯುತ್ತಿರುವ ವರ್ಷಧಾರೆಗೆ ಮಲೆನಾಡು ತತ್ತರಗೊಂಡಿದ್ದು ಪಟ್ಟಣದ ಬಹುತೇಕ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ.
ಒಮ್ಮೆ ಅತಿವೃಷ್ಟಿ ಇನ್ನೊಮ್ಮೆ ಅನಾವೃಷ್ಟಿಯ ಆಟದ ನಡುವೆ ರೈತರ ಪಾಡು ಹೇಳತೀರದಂತಾಗಿದೆ. ಕಳೆದ ತಿಂಗಳು ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಹುತೇಕ ಬೆಳೆ ನಾಶವಾಗಿತ್ತು. ಜುಲೈ ಕೊನೆಯ ವಾರದಲ್ಲಿ ಬಂದ ಮಗ್ಗೆ ರೈತರು ಕೊಂಚ ಉಸಿರಾಡುವಂತೆ ಮಾಡಿತ್ತು. ಆದರೆ ಈಗ 4 ದಿನದಿಂದ ಸತತವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಈಗಿರುವ ಅಲ್ಪ ಬೆಳೆಯೂ ಕೈ ಜಾರುವ ಆತಂಕ ಮನೆ ಮಾಡಿದೆ. ಸಾಲ ಸೋಲಾ ಮಾಡಿ ಬಿತ್ತನೆ ಬೀಜ, ಗೊಬ್ಬರ ಹಾಕಿ ಬೆಳೆದ ಬೇಳೆ ಹಾಳಾಗುತ್ತಿದ್ದು ನಿಲ್ಲೋ ನಿಲ್ಲೋ ಮಳೆರಾಯ ಎಂದು ದೇವರಿಗೆ ಮೊರೆ ಹೋಗುತ್ತಿದ್ದಾರೆ.
ಶುಂಠಿ, ಆಲೂಗಡ್ಡೆ, ಕಾಫಿ ಇನ್ನಿತರ ಬೆಳೆಗಳು ಮಳೆಯ ಆರ್ಭಟಕ್ಕೆ ಕೊಳೆಯವ ರೋಗಕ್ಕೆ ತುತ್ತಾಗುತ್ತಿವೆ. ಮಲೆನಾಡು ಹಾಗು ಬಯಲು ಸೀಮೆಯ ಬಹುತೇಕ ಕಡೆ ಶುಂಠಿಗೆ ಕೊಳೆಯವ ರೋಗ ಬಂದಿದ್ದು ಹಾಕಿರುವ ಖರ್ಚು ಬಂದರೆ ಸಾಕು ಎಂದು ಅವಧಿಗೂ ಮುನ್ನವೇ ಕಿತ್ತು ವರ್ತಕರು ಕೇಳಿದ ಬೆಲೆಗೆ ಕೊಡುತ್ತಿದ್ದಾರೆ. ಶುಂಠಿಗೆ ಈ ಬಾರಿ ಅಧಿಕ ಬೆಲೆ ಬರುತ್ತದೆ ಎಂಬ ನಿಟ್ಟಿನಲ್ಲಿ ಬಹುತೇಕ ರೈತರು ಶುಂಠಿ ಬೆಳೆಗೆ ಗಂಟು ಬಿದ್ದಿದ್ದರು. ಒಂದೆಡೆ ಕೊಳೆ ರೋಗ, ಇನ್ನೊಂದೆಡೆ ಬೆಲೆ ಇಳಿಕೆಯಿಂದ ಶುಠಿ ಬೆಳೆದವರ ಸ್ಥಿತಿ ಚಿಂತಾಜನಕವಾಗಿದೆ.
ಕಾಫಿ ಬೆಳೆ ಹಾನಿ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಗೆ ಈಗ ತಾನೆ ಕಟ್ಟುತ್ತಿರುವ ಕಾಫಿ ಕಾಯಿಗಳು ಉದುರಲು ಆರಂಭಿಸಿದ್ದು ಕಾಫಿಗೆ ಉತ್ತಮ ಬೆಲೆ ಇದ್ದರೂ ಬೆಳೆ ಕೈಕೊಡುವ ಸಾದ್ಯತೆಯಿದೆ. ತಾಲೂಕಿನ ಬಿಕ್ಕೋಡು, ಅರೇಹಳ್ಳಿ, ಮಲಸಾವರ, ಚೀಕನಹಳ್ಳಿ, ಗೆಂಡೇಹಳ್ಳಿಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದರೆ ಅರೆಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಇಲ್ಲಿನ ಯಗಚಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಬೀಳುತ್ತಿದ್ದು ಹೆಚ್ಚಿನ ಒಳ ಹರಿವು ಬರುತ್ತಿದೆ. 2350 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯ 964. 6 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿದ್ದು 962 . 60 ಮೀಟರ್ ನೀರಿದೆ.