ಹೊಳೆನರಸೀಪುರ: ಅಜ್ಞಾನವೆಂಬುದು ನಮ್ಮೊಂದಿಗೇ ಕೊನೆಯಾಗಿ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮೌಲ್ಯವನ್ನು ಕೊಡುಗೆಯಾಗಿ ನೀಡಬೇಕಾದದ್ದು ಪೋಷಕರ ಮೊದಲ ಗುರಿಯಾಗಲಿ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ನುಡಿದರು. ಇಲ್ಲಿನ ಸೀತಾಲಕ್ಷ್ಮೀ ರಂಗಸ್ವಾಮಿ ಶೆಟ್ಟಿ ಚಾರಿಟಬಲ್ ಟ್ರಸ್ಟಿನ ವತಿಯಿಂದ ಪಟ್ಟಣದಲ್ಲಿನ ಶ್ರೀ ರಾಘವೇಂದ್ರ ಮಠದಲ್ಲಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕ್ಷೇತ್ರವಿರಲಿ ಅರ್ಹರನ್ನು ಗುರುತಿಸುವ ಪ್ರಾಮಾಣಿಕ ಕಳಕಳಿ ನಮ್ಮ ನಾಗರಿಕ ಸಮಾಜದಲ್ಲಿ ಹೆಚ್ಚಾಗಿ ಮೂಡಿಬರಬೇಕಾದ ಅವಶ್ಯಕತೆ ಇದೆ ಎಂದರು.
ಸೇವಾ ಮನೋಭಾವ: ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಎ.ನಾಗರಾಜು ಮಾತನಾಡಿ, ಸೇವೆಗೆ ಯಾವುದೇ ಮಿತಿ ಇಲ್ಲ. ಸೇವಾ ಮನೋಭಾವದಿಂದ ಮುನ್ನಡೆದಾಗ ಉತ್ತಮ ದಾರಿ ಲಭ್ಯವಾಗುತ್ತದೆ ಎಂದರು.
ಟ್ರಸ್ಟಿನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮಬಲವನ್ನು ಬೆಳೆಸಿಕೊಳ್ಳಲು ಸೇವಾಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದರು.