ಅಂಗವಿಕಲರ ಇಲಾಖೆ ನಿರ್ದೇಶಕರ ಅಮಾನತಿಗೆ ಆಗ್ರಹ
ಹಾಸನ: ಅಂಗವಿಕಲರು ಭಿಕ್ಷುಕರು, ಅವರಿಂದ ಸರ್ಕಾರಕ್ಕೆ ಹೊರೆ ಎಂಬ ಹೇಳಿಕೆಯನ್ನು ನೀಡಿದ ರಾಜ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕ ಸಬಲೀಕರಣದ ನಿರ್ದೇಶಕರನ್ನು ಈ ಕೂಡಲೇ ಅಮಾನತುಗೊಳಿಸುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂಗವಿಕಲರ ಅಭಿವೃದ್ಧಿಗಾಗಿ ನೇಮಕವಾದ ಅಧಿಕಾರಿಯುವ ಅಂಗವಿಕಲರ ಬಗ್ಗೆ ಅವಹೇಳನಕಾರಿಯ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಸಂಗತಿಯಾಗಿದೆ. ಇಡೀ ಅಂಗವಿಕಲರ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ. ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ಹೇಳಿಕೊಳ್ಳಬೇಕು. ಸಮಸ್ಯೆಗಳ ಕುರಿತು ವಿವರಿಸಲು ಬಂದ ಅಂಗವಿಕಲರನ್ನು ಅವಮಾನಿಸುವುದು ಸರಿಯಲ್ಲ. ನಿರ್ದೇಶಕರು ಕ್ಷಮೆ ಕೇಳಬೇಕು ಮತ್ತು ಸರ್ಕಾರವೂ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.