ಅಂಧ ಮಕ್ಕಳ ಶಾಲೆಯಲ್ಲಿ ಕನಸು ಚಿತ್ರಕ್ಕೆ ಚಾಲನೆ
ಹಾಸನ: ನಗರದ ಅಂಧ ಮಕ್ಕಳ ಶಾಲೆಯಲ್ಲಿ ಶನಿವಾರ ಕನಸು ಎಂಬ ನೂತನ ಕನ್ನಡ ಚಲನಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ಮದನಗೌಡ ಚಾಲನೆ ನೀಡಿ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ.ಎಚ್.ನಾಗರಾಜ್, ಸುರೇಶ್ ಗುರೂಜಿ, ಕಟ್ಟಾಯ ಶಿವಕುಮಾರ್, ಶ್ರೀರಾಮ ಸೇನೆಯ ಹೇಮಂತ್ ಕುಮಾರ್, ರವಿ ನಾಕಲಗೂಡು, ಚಿತ್ರದ ನಿರ್ದೇಶಕರಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್ ಸೇರಿದಂತೆ ಚಿತ್ರತಂಡದ ಕಲಾವಿದರು ಇದ್ದರು.
'ಕ್ರೀಡೆಗಳತ್ತ ಒಲವು ತೋರಿದರೆ ಭವಿಷ್ಯದಲ್ಲಿ ಕೆಲಸಕ್ಕೆ ಸಹಕಾರಿ'
ಅರಸೀಕೆರೆ: ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯತ್ತ ಹೆಚ್ಚಿನ ಒಲವು ತೋರಿದರೆ ನಿಮ್ಮ ಆರೋಗ್ಯ ಹಾಗೂ ಭವಿಷ್ಯದಲ್ಲಿ ನಿಮ್ಮ ವೃತ್ತಿಗೆ ಸಹಕಾರಿಯಾಗುತ್ತದೆ ಎಂದು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ರೋಟರಿ ಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ವಿಜಯ ಸಾಧಿಸಿದ ತಾಲ್ಲೂಕಿನ ಬಾಚೇನಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರು, ಗುಲ್ಬರ್ಗ, ಬೆಳಗಾಂ ವಿಭಾಗಗಳ ವಿರುದ್ದ ಜಯಗಳಿಸಿದ್ದೀರಿ, ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿಪರ ತರಬೇತಿ ಪಡೆದವರಿಂದ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಂತಹ ತಂಡಗಳ ವಿರುದ್ಧ ಸೆಣಸಿ ಜಯ ಸಾಧಿಸಿರುವುದು ಶ್ಲಾಘನೀಯ ಸಂಗತಿ ಎಂದರು. ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಪ್ರತಿ ಸರ್ಟಿಫಿಕೇಟ್‌ಗಳನ್ನು ಸಂಗ್ರಹಿಸಬೇಕು. ಇವು, ಮುಂದಿನ ನಿಮ್ಮ ಜೀವನ ಭವಿಷ್ಯಕ್ಕೆ ಇವು ಸಹಕಾರಿಯಾಗುತ್ತವೆ ಎಂದು ಹೇಳಿದರು.