ಅರಸೀಕೆರೆ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು
ಕ.ಪ್ರ.ವಾರ್ತೆ ಟಿ ಅರಸೀಕೆರೆ ಟಿ ಫೆ. 1
ತೀವ್ರ ಬರಗಾಲ, ಮಳೆಯ ಅಭಾವ, ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿರುವ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು 0.800 ಟಿಎಂಸಿ ಮತ್ತು ಕುಡಿಯುವ ನೀರು ಒದಗಿಸಲು 0.512 ಟಿಎಂಸಿ ನೀರನ್ನು ಎತ್ತಿನ ಹೊಳೆ ಯೋಜನೆಯ ಮೂಲಕ ಒದಗಿಸಲು ಸರ್ಕಾರದ ಮಂಜುರಾತಿ ದೊರೆತಿದೆ ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.
ಇದಕ್ಕೆ ಸಹಕರಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಎಲ್ಲಾ ಅಧಿಕಾರಿಗಳಿಗೆ ಹಾಗೂ ಈ ಹೋರಾಟದಲ್ಲಿ ತಮ್ಮನ್ನು ಬೆಂಬಲಿಸಿದ ಮಿತ್ರ ಶಾಸಕರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಸೂಚನೆ: ಶನಿವಾರ ತಾಪಂ ಸಾಮರ್ಥ್ಯ ಸೌಧದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ತಾಲ್ಲೂಕಿನ ಜನರು 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದರ ಫಲವಾಗಿ ಎತ್ತಿನ ಹೊಳೆ ಯೋಜನೆಯನ್ನು 2012ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕೈಗೆತ್ತಿಕೊಳ್ಳಲು ತೀರ್ಮಾನಿಸಿ, ಮೊದಲನೇ ಡಿಪಿಆರ್ ತಯಾರು ಮಾಡಿ 2669.83 ಕೋಟಿ ರು.ಗಳಿಗೆ ಟೆಂಡರ್ ಆಹ್ವಾನಿಸಿ ಮೊದಲ ಹಂತದ ಕಾಮಗಾರಿ ಅನುಷ್ಠಾನಕ್ಕೆ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಸೂಚಿಸಿತ್ತು.
ಕೆರೆ ತುಂಬಿಸುವ ಯೋಜನೆ: ಮೊದಲನೇ ಡಿಪಿಆರ್ನಲ್ಲಿ ಅಡಕವಾಗಿರುವ ಅಂಶಗಳೆಂದರೆ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರೆಹೊಳೆ ಮತ್ತು ಹೊಂಗಡಹಳ್ಳಗಳಿಗೆ ಅಡ್ಡಲಾಗಿ 8 ಸ್ಥಳಗಳ ಹತ್ತಿರ ಬ್ಯಾರೇಜ್ ನಿರ್ಮಿಸಿ ಒಟ್ಟಾರೆ 24.01 ಟಿಎಂಸಿ ನೀರನ್ನು ಸುಮಾರು 280 ಮೀಟರ್ ಎತ್ತರಕ್ಕೆ ಎತ್ತಿ ಜಿಲ್ಲೆಯ ಸಕಲೇಶಪುರದ ಹತ್ತಿರ ಹರುವನಹಳ್ಳಿ ಬಳಿ ವಿತರಣಾ ತೊಟ್ಟಿಗೆ ಬಿಟ್ಟು ಅಲ್ಲಿಂದ ಗುರುತ್ವಾಕರ್ಷಣೆಯ ಮುಖಾಂತರ ಅವಶ್ಯಕತೆಯಿರುವ ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಸೂಚನೆ: ಈ ಯೋಜನೆ ಕುರಿತಂತೆ ಅಂದಿನ ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಸ್.ಆರ್.ಬೊಮ್ಮಾಯಿ ಉತ್ತರ ನೀಡಿ ಡಿಪಿಆರ್ 2ನ್ನು ತಯಾರಿಸಿ ಈ ಯೋಜನೆಯಲ್ಲಿ ಯಾವ ಯಾವ ಮಾರ್ಗದ ಮೂಲಕ ನೀರನ್ನು ತರಬೇಕೆಂದು ಸರ್ವೇ ಕಾರ್ಯ ಮಾಡಿಸಲಾಗುವುದೆಂದು ತಿಳಿಸಿದ ತಕ್ಷಣವೇ ನಾನು ಕಾರ್ಯೋನ್ಮುಖನಾಗಿ ಜಲ ಸಂಪನ್ಮೂಲ ಸಚಿವರಿಗೆ ಪತ್ರ ನೀಡಿ ಈ ಯೋಜನೆಯಲ್ಲಿ ಅರಸೀಕೆರೆ ಮಾರ್ಗವಾಗಿಯೇ ನೀರು ಹರಿಸಬೇಕು ಮತ್ತು 24.01 ಟಿಎಂಸಿ ನೀರಿನಲ್ಲಿ 2 ಟಿಎಂಸಿ ನೀರನ್ನು ನಮ್ಮ ತಾಲ್ಲೂಕಿನ ಕೆರೆ ಕೆರೆಗಳಿಗೆ ಒದಗಿಸಬೇಕೆಂದು ಮನವಿ ಸಲ್ಲಿಸಿದ್ದಾಗ ಅವರು ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಇಂಜಿನಿಯರ್ಗೆ ಪತ್ರ: ನಂತರ ಸರ್ಕಾರ ಬದಲಾಗಿ, ಕಾಂಗ್ರೆಸ್ ಸರ್ಕಾರ ಈ ಯೋಜನೆಯಲ್ಲಿ ಮೊದಲನೇ ಡಿಪಿಆರ್ಗೆ ಇಟ್ಟಿದ್ದ ಹಣವನ್ನು 2669.83ರಿಂದ 3418.00 ಕೋಟಿ ರು.ಗಳಿಗೆ ಹೆಚ್ಚಿಸಿ, 2ನೇ ಹಂತದ ಕಾಮಗಾರಿಗಾಗಿ 9494.35 ಕೋಟಿ ಒಟ್ಟಾರೆ ಯೋಜನೆಯ ಅಂದಾಜು ಮೊತ್ತ 12912.35 ಕೋಟಿ ರು.ಗಳಿಗೆ ನಿಗದಿಪಡಿಸಿ ಮರು ಟೆಂಡರ್ ಕರೆದಿದ್ದು ಟೆಂಡರ್ ಅಂತಿಮ ಹಂತದಲ್ಲಿದೆ.
ಡಿಪಿಆರ್ 2ನ್ನು ಸರ್ಕಾರ ಪ್ರಾರಂಭಿಸಿದಾಗ ನಾನು ಸತತ ಪ್ರಯತ್ನ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಿ ಮಾನ್ಯ ಮುಖ್ಯಮಂತ್ರಿಗಳು, ಜಲಸಂಪನ್ಮೂಲ, ಇಲಾಖಾ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಇಂಜಿನಿಯರ್ ಅವರಿಗೆ ಯೋಜನೆ ಅರಸೀಕೆರೆ ಮಾರ್ಗವಾಗಿ ಹೋಗುವುದರಿಂದ ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪತ್ರ ಬರೆದಿರುವುದಾಗಿ ತಿಳಿಸಿದರು.
ನಡಾವಳಿಕೆ ಸಲ್ಲಿಕೆ: ತಾವು ಸರ್ಕಾರದ ಅಂದಾಜು ಸಮಿತಿಯ ಸದಸ್ಯರಾಗಿದ್ದು 2014ರ ಜ.6ರಂದು ಸಮಿತಿಯ ಸಭೆಯಲ್ಲಿ ಅರಸೀಕೆರೆಗೆ ಎತ್ತಿನಹೊಳೆ ಯೋಜನೆಯಲ್ಲಿ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಪ್ರಸ್ತಾಪ ಬಂದಿರುತ್ತದೆ ಎಂದಾಗ ತಾವು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೆರೆ ಕೆರೆಗಳಿಗೆ ನೀರು ತುಂಬಿಸಬೇಕೆಂದು ಚರ್ಚೆ ನಡೆಸಿ ಪ್ರಸ್ತಾವನೆ ಸಲ್ಲಿಸಿದ್ದು ಅದರಂತೆ ಸಮಿತಿಯು 2014ರ ಜ.13ರಂದು ನಿರ್ಣಯ ಕೈಗೊಂಡು ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ತುಂಬಿಸುವ ನಡಾವಳಿಕೆಯನ್ನು ಸರ್ಕಾರಕ್ಕೆ ನೀಡಲಾಯಿತು ಎಂದು ಅವರು ವಿವರಿಸಿದರು.
ಸರ್ಕಾರಕ್ಕೆ ಒತ್ತಾಯ: 2ನೇ ಡಿಪಿಆರ್ ಅಂತಿಮಗೊಳಿಸುವ ಸಂದರ್ಭಕ್ಕೆ ಸರಿಯಾಗಿ 2014ರ ಜ. 22ರಂದು ವಿಧಾನಸಭಾ ಅಧಿವೇಶನದಲ್ಲಿ ತಾವು ಈ ಯೋಜನೆಯಡಿ ಬರುವ ಎಲ್ಲಾ ಮಿತ್ರ ಶಾಸಕರುಗಳನ್ನು ಒಗ್ಗೂಡಿಸಿ ನಿಯಮ 60ರ ಅಡಿಯಲ್ಲಿ ಪ್ರಸ್ತಾವನೆ ಮಂಡಿಸಿ ಚರ್ಚೆಗೆ ಅವಕಾಶ ಸಿಗದಿದ್ದಾಗ ಸದಸನದಲ್ಲಿ ಧರಣಿ ಸತ್ಯಾಗ್ರಹ ನಡೆಸಿ, ಜ.28ರಂದು ಸದರಿ ಯೋಜನೆಯ ಬಗ್ಗೆ ಚರ್ಚೆ ಮಾಡಿ ತಾಲ್ಲೂಕಿನ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಬಯಲುಸೀಮೆಯ ಪ್ರದೇಶವಾಗಿರುವುದರಿಂದ ಕೆರೆ ಕೆರೆಗಳಿಗೆ ನೀರು ಒದಗಿಸಬೇಕೆಂದು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಹೇಳಿದರು. ಅದರಂತೆ, ಜ. 30ರಂದು ಮಾನ್ಯ ಮುಖ್ಯಮಂತ್ರಿಗಳು ಉತ್ತರ ನೀಡಿ ತಮ್ಮ ಮನವಿಗೆ ಸ್ಪಂದಿಸಿ ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ತುಂಬಿಸಲು ಒಪ್ಪಿ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಘೊಷಣೆ ಮಾಡಿದ್ದು ಈ ವಿಚಾರ ವಿಧಾನಸಭಾ ಅಧಿವೇಶನದ ಕಡತದಲ್ಲಿ ದಾಖಲಾಗಿರುತ್ತದೆ ಎಂದರು. ಈ ಯೋಜನೆಯು ತಿಪಟೂರು ಮಾರ್ಗವಾಗಿ ಚಿಕ್ಕನಾಯಕನಹಳ್ಳಿ ಕೊರಟಗೆರೆ ಮಾರ್ಗವಾಗಿ ಭೈರಗೊಂಡ್ಲವಿನಲ್ಲಿ ಸೇರುತ್ತದೆ.
ಅಲ್ಲಿ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ನೀರು ಒದಗಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ತಾಪಂ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಎಚ್.ಆರ್.ರಾಜು, ಬಂಡಿಗೌಡ್ರು ರಾಜಣ್ಣ, ಜವನಪ್ಪ ಹಾಗೂ ಇತರರು ಇದ್ದರು.