ಪರಿಸರ ರಕ್ಷಣೆಗೆ ಹೆಚ್ಚು ಗಿಡ ಬೆಳೆಸಬೇಕು'
ಹಾಸನ: ಉತ್ತಮ ಪರಿಸರವನ್ನು ಕಾಪಾಡಲು ಹೆಚ್ಚು ಹೆಚ್ಚು ಗಿಡ ಬೆಳೆಸುವಂತೆ ಲೋಕಾಯುಕ್ತ ಆರಕ್ಷಕ ಅಧೀಕ್ಷಕ ಸಿ.ಬಿ. ವೇದಮೂರ್ತಿ ಕರೆ ನೀಡಿದರು. ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ರಸ್ತೆಯ ಬಳಿ ಇರುವ ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮೂರು ದಿನಗಳ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆಯ ಸುತ್ತ ಇರುವ ಸ್ಥಳದಲ್ಲಿಯೇ ಗಿಡವನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಬಹುದು. ಯಾರೂ ಪರಿಸರ ನಾಶ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದೆಂದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ ನೋಡುಗರಿಗೆ ಮನ ಉಲ್ಲಾಸ ತರುತ್ತದೆ. ಇಂತಹ ವಾತಾವರಣ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.
'ಅಕ್ರಮ ಮರಳುಗಾರಿಕೆಗೆ ಪೊಲೀಸರೇ ಬೆಂಗಾವಲು'
ಸಕಲೇಶಪುರ: ತಾಲೂಕಿನ ಮಳಲಿ, ರಾಮೇನಹಳ್ಳಿ ಹಾಗೂ ಹಾಲೇಬೆಲೂರು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಪೊಲೀಸರೇ ಬೆಂಗವಾಲಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಲೇಬೇಲೂರು ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನದಿಯಿಂದ ಹಗಲುವೇಳೆ ಟ್ರಾಕ್ಟರ್ ಮೂಲಕ ದಿಣ್ಣೆ ಪ್ರದೇಶಕ್ಕೆ ಮರಳು ಸಂಗ್ರಹಿಸಿ ರಾತ್ರಿ ವೇಳೆ ಲಾರಿಗಳಲ್ಲಿ ಹಾಸನ ಮತ್ತಿತ್ತರ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ ಎಂಬ ದೂರನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ ಹಿನ್ನೆಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗಾಗಿ ಈ ಗ್ರಾಮಗಳಿಗೆ ರಿಸರ್ವ್ ಪೊಲೀಸ್ ವ್ಯಾನ್ ನಿಯೋಜಿಸಲಾಗಿದೆ. ಆದರೆ, ಈ ಪೊಲೀಸರು ಅಕ್ರಮ ಮರಳುಗಾರಿಕೆ ನಡೆಸುವವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಪರಿಣಾಮ ಹಗಲು ರಾತ್ರಿ ಮರಳು ಸಾಗಟ ನಡೆಸಲಾಗುತ್ತಿದ್ದು, ರಾತ್ರಿವೇಳೆ ಗ್ರಾಮದಲ್ಲಿ ಬೀಡುಬಿಡುವ ಪೊಲೀಸರಿಗೆ ಮರಳು ಸಾಗಟದಲ್ಲಿ ತೊಡಗಿರುವ ವ್ಯಕ್ತಿಗಳು ಪೊಲೀಸರಿಗೆ ಊಟ, ತಿಂಡಿ ಮತ್ತಿತರ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ದಿನಂ ಪ್ರತಿ ಹತ್ತಾರು ಲಾರಿಗಳು ಮರಳು ಹೊತ್ತು ಸಾಗುತ್ತಿದ್ದರೂ, ಇವುಗಳನ್ನು ಹಿಡಿಯುವ ಗೋಜಿಗೆ ಹೋಗದ ಪೊಲೀಸರನ್ನು ತಕ್ಷಣವೇ ಬದಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.