ಪ್ರದೇಶಾಭಿವೃದ್ಧಿ ಕಾಮಗಾರಿ ಶೀಘ್ರ ಮುಗಿಸಿ
ಹಾಸನ: ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಈವರೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಅನುಮೋದನೆ ನೀಡಲಾಗಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಾತಿ ನೀಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ದೇವೇಗೌಡರು, 2009 ರಿಂದ 2013-14ನೇ ಸಾಲಿನವರೆಗೆ 18 ಕೋಟಿ ರು.ಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಉಳಿಕೆ ಹಣ ಬಿಡುಗಡೆಗೆ ಈಗಾಗಲೇ ನೀಡಲಾಗಿರುವ ಅನುದಾನದ ಸದ್ಬಳಕೆಯಾಗಿರುವ ಬಗ್ಗೆ ಬಿಲ್ಲುಗಳನ್ನು ಪಾವತಿಸಬೇಕಿದೆ. ಹೀಗಾಗಿ ಶೀಘ್ರವೇ ಕಾಮಗಾರಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು.
ಬಿಲ್ ಪಾವತಿಸಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಬಾಕಿ ಇರುವ ಅನುದಾನದ ಸದ್ಬಳಕೆ ಮಾಡಬೇಕು. ಚುನಾವಣೆ ಘೋಷಣೆ ನಂತರ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗದು. ಹಾಗಾಗಿ ಈವರೆಗೆ ಅನುಮೋದನೆ ಪಡೆದಿರುವ ಎಲ್ಲಾ ಕಾಮಗಾರಿಗಳನ್ನು ಬೇಗ ಮುಗಿಸುವಂತೆ ಹಾಗೂ ಈಗಾಗಲೇ ಪೂರ್ಣಗೊಂಡಿರುವ ಕೆಲಸಗಳಿಗೆ ಬಿಲ್ ಪಾವತಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳುವಂತೆ ಎಚ್.ಡಿ. ದೇವೇಗೌಡ ಅವರು ತಿಳಿಸಿದರು.
ಡಿಸಿ ಮಾಹಿತಿ: ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾಹಿತಿ ನೀಡಿ, ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲೆಗೆ 2009-10ರಲ್ಲಿ 2 ಕೋಟಿ ರು., 2010-11ರಲ್ಲಿ 2 ಕೋಟಿ, 2011-12ರಲ್ಲಿ 5 ಕೋಟಿ, 2012-13ರಲ್ಲಿ 5 ಕೋಟಿ ರು. ಸೇರಿದಂತೆ ಈವರೆಗೆ ಒಟ್ಟು 14 ಕೋಟಿ ರು. ಬಿಡುಗಡೆಯಾಗಿದೆ. 2013-14ನೇ ಸಾಲಿನ ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದರು.
ದೇವೇಗೌಡ ಅವರು, 749 ಕಾಮಗಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಎಲ್ಲಾ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಪಡೆದು ಅನುಮೋದನೆ ನೀಡಲಾಗಿದೆ.
ಇದರಲ್ಲಿ 504 ಕಾಮಗಾರಿಗಳಿಗೆ 10.84 ಕೋಟಿ ರು. ಬಿಡುಗಡೆ ಮಾಡಲಾಗಿದೆ. 411 ಕಾಮಗಾರಿಗಳು ಪೂರ್ಣಗೊಂಡು 857 ಲಕ್ಷ ರು. ವೆಚ್ಚವಾಗಿದೆ. 93 ಕಾಮಗಾರಿಗಳು ಪ್ರಗತಿಯಲ್ಲಿದ್ದು, 1ನೇ ಹಂತದಲ್ಲಿ 2.27 ಕೋಟಿ ರು. ಬಿಡುಗಡೆ ಮಾಡಿದ್ದು 2ನೇ ಕಂತಿನಲ್ಲಿ ಬಿಡುಗಡೆ ಮಾಡಲು 86 ಲಕ್ಷ ರು. ಬಾಕಿ ಇದೆ ಎಂದು ವಿ. ಅನ್ಬುಕುಮಾರ್ ಸಭೆಗೆ ಮಾಹಿತಿ ನೀಡಿದರು. ಪಟ್ಟಿ 201.50 ಲಕ್ಷ ರು. ಅಂದಾಜು ವೆಚ್ಚದ 79 ಕಾಮಗಾರಿಗಳಿಗೆ ಅಂದಾಜು ಪಟ್ಟಿ ನಿರೀಕ್ಷಿಸಲಾಗಿದ್ದು ಜ.31ರಂದು 27 ಕಾಮಗಾರಿಗಳಿಗೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಇನ್ನು 52 ಕಾಮಗಾರಿಗಳಿಗೆ ಒಂದೆರಡು ದಿನಗಳಲ್ಲಿ ಅಂದಾಜು ಪಟ್ಟಿ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಇನ್ನೊಂದು ವಾರದಲ್ಲಿ ಒಂದೂವರೆ ಕೋಟಿ ರು.ಗಳ ಬಿಲ್ಲುಗಳ ಪಾವತಿಯಾಗಬಹುದು. ಸುಮಾರು 2 ಕೋಟಿ ರು. ಕಾಮಗಾರಿಗಳ ಬಿಲ್ ಪಾವತಿಯಾದಲ್ಲಿ ಬಾಕಿ ಅನುದಾನ ಬಿಡುಗಡೆಯಾಗಲಿದೆ ಎಂದರು.
ರೇವಣ್ಣ ಸಲಹೆ: ಇದೇ ವೇಳೆ ಶಾಸಕ ಎಚ್.ಡಿ. ರೇವಣ್ಣ ಅವರು, ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ತಾಲ್ಲೂಕುವಾರು ಪ್ರಗತಿಯ ಬಗ್ಗೆ ಮಾಹಿತಿಯನ್ನು ಎರಡು ಉಪ ವಿಭಾಗಗಳ ಎಂಜಿನಿಯರ್ಗಳಿಂದ ವಿವರ ಪಡೆದರು. ಅನಿವಾರ್ಯವಾಗಿರುವ ಕೆಲವೊಂದು ಕಾಮಗಾರಿಗಳ ಬದಲಾವಣೆಗೆ ಸಂಸದರಿಂದ ಅನುಮೋದನೆ ಪಡೆದುಕೊಳ್ಳುವಂತೆ ತಿಳಿಸಿದರು.
ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ಸಹ ಚರ್ಚೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತೆಂಗು ಬೆಳೆಗಾರರಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದ ಅವರು ತಾವು ಸರ್ಕಾರದಿಂದ ಇನ್ನಷ್ಟು ನೆರವು ಪಡೆಯಲು ಶ್ರಮಿಸುವುದಾಗಿ ಹೇಳಿದರು.