ಮಕ್ಕಳ ಬೆಳವಣಿಗೆಗೆ 'ಎ' ಅನ್ನಾಂಗ ದ್ರಾವಣ ಅಗತ್ಯ
ಅರಸೀಕೆರೆ: ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಎ ಅನ್ನಾಂಗ ದ್ರಾವಣ ಅತ್ಯಗತ್ಯವಾಗಿದ್ದು ಪೋಷಕರು ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೆ ದ್ರಾವಣ ಹಾಕಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ದಿನೇಶ್ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಯ ಆವರಣದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಎ ಅನ್ನಾಂಗ ದ್ರಾವಣ ವಿತರಿಸುವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ, ಮಾತನಾಡಿದ ಅವರು, ಮಕ್ಕಳ ಸರ್ವತೋಮುಕ ಬೆಳವಣಿಗೆಗೆ ಎ ಅನ್ನಾಂಗ ದ್ರಾವಣ ಅಗತ್ಯವಾಗಿದೆ ಎಂದರು.
ರೋಟರಿ ಅಧ್ಯಕ್ಷ ಪ್ರವೀಣ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 29,385 ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದು ಪ್ರತಿಯೊಂದು ಮಗುವಿಗೂ ಅನ್ನಾಂಗ ದ್ರಾವಣ ವಿತರಿಸುವುದು ಅಗತ್ಯವಾಗಿದೆ. ಇದರಿಂದಾಗಿ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ. ಮಕ್ಕಳನ್ನು ಬಾಲ್ಯದಿಂದಲೇ ಆರೋಗ್ಯಪೂರ್ಣ ರೋಗಮುಕ್ತ, ಅಂಗವೈಕಲ್ಯ ಮುಕ್ತವಾಗಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಅಧ್ಯಕ್ಷೆ ಅನ್ನಲಕ್ಷ್ಮಿ, ಡಾ. ಸರ್ವಮಂಗಳ, ರೋಟರಿ, ಇನ್ನರ್‌ವ್ಹೀಲ್ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.