ಶಾಶ್ವತ ನೀರಾವರಿಗಾಗಿ 5 ರಂದುಪ್ರತಿಭಟನೆ
ಹಾಸನ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಗಂಡಸಿ ಸಂತೆ ಮೈದಾನದಲ್ಲಿ ಫೆ. 10ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಗೀರಥ ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಮಳೆ ಇಲ್ಲದೆ ಜಿಲ್ಲೆಯ ರೈತ ಸೊರಗುವಂತಾಗಿದೆ. ಜಾನುವಾರುಗಳು ಕುಡಿಯಲು ನೀರಿಲ್ಲದೆ ಮೃತಪಡುವ ಪರಿಸ್ಥಿತಿ ಬಂದಿದೆ. ಅಂತರ್ಜಲ ಇಲ್ಲವಾಗಿದ್ದು, ಕೊಳವೆ ಬಾವಿ ತೆಗೆಸಿದರೂ ನೀರು ಸಿಗದೆ ವಿಫಲವಾಗುತ್ತಿದೆ. ರೈತ ಸಾಲ ಮಾಡಿ ಸಾಯುವಂತಾಗಿದೆ. ಜೊತೆಗೆ ರೈತರ ಮಕ್ಕಳು ವ್ಯವಸಾಯ ವಂಚಿತರಾಗಿದ್ದು, ಊರು ಬಿಟ್ಟು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಎಲ್ಲ ಗ್ರಾಮಗಳಲ್ಲಿ ವೃದ್ಧರು ಮಾತ್ರ ಉಳಿದಿದ್ದು, ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಈ ಎಲ್ಲಾ ಸಮಸ್ಯೆಗಳಿಗೆ ರೈತರು ಸಂಘಟಿತರಾಗಿ ನೀರಿಗಾಗಿ ಹೋರಾಟ ನಡೆಸುವುದೊಂದೇ ಪರಿಹಾರವಾಗಿದೆ ಎಂದು ಹೇಳಿದ್ದಾರೆ. ನೀರಾವರಿ ನಮ್ಮದೇ ಸಮಸ್ಯೆ, ಪರಿಹಾರ ನಮ್ಮಿಂದಲೇ ಸಾಧ್ಯ. ಆದ್ದರಿಂದ ಎಲ್ಲಾ ರೈತರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿದ್ದಾರೆ.
ಕಾಡಾನೆ ಹಾವಳಿ: 5ರಂದು ರೈತ ಸಂಘದಿಂದ ಪ್ರತಿಭಟನೆ
ಹಾಸನ: ಕಾಡಾನೆ ಹಾವಳಿ ಮತ್ತು ಪಡಿತರ ಚೀಟಿ ಅವ್ಯವಹಾರವನ್ನು ಖಂಡಿಸಿ ಫೆ. 5ರಂದು ಆಲೂರು ತಾಲೂಕು ಕಚೇರಿ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕಣಗಾಲಲ್ಮೂರ್ತಿ ತಿಳಿಸಿದ್ದಾರೆ.
ಸರ್ಕಾರದಿಂದ ಬಡಜನರಿಗೆ ಸಲವತ್ತುಗಳು, ಜಾತಿ ಆಧಾರದ ಮೇಲೆ ಕೊಡದೆ ಎಲ್ಲಾ ಜಾತಿಯ ಜನಾಂಗಕದ ರೈತರಿಗೆ ಸಿಗುವಂತಾಗಬೇಕು. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಮರಗಳನ್ನು ಕಡಿಯಲು ಸರ್ಕಾರ ಯಾವುದೇ ಷರತ್ತುಗಳನ್ನು ಹಾಕಬಾರದು ಎಂದು ಹೇಳಿರುವ ಅವರು, ರೈತ ಮನಸ್ಸು ಮಾಡಿದರೆ ಎರಡು ವರ್ಷ ಯಾವುದೇ ಬೆಳೆಯನ್ನು ಬೆಳೆಯದೆ ಹೋದರೆ ಸರ್ಕಾರದ ಹಾಗೂ ಅಧಿಕಾರಿಗಳ ಜೀವನ ಯಾವ ರೀತಿ ಇರುತ್ತದೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪರಿಹಾರ ನೀಡಬೇಕು: ರೈತರ ಜಮೀನಿನಲ್ಲಿರುವ ಬೆಳೆಗಳು ಒಂದು ಕಡೆ ಅತಿವೃಷ್ಟಿಯಿಂದ, ಮತ್ತೊಂದು ಕಡೆ ಅನಾವೃಷ್ಟಿ ಹಾಗೂ ಕಾಡಾನೆಗಳ ಉಪಟಳದಿಂದ ಸಂಪೂರ್ಣ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ, ಒಮ್ಮೆ ಎಲ್ಲಾ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಬೇಕು. ಇಲ್ಲಿಯವರೆಗೂ ಹಾಳಾಗಿರುವ ಬೆಳೆಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬದಲಾವಣೆ ಮಾಡಬೇಕು: ರೈತರ ಜಮೀನಿಗೆ ಐಪಿ ಸೆಕ್ಟರ್ ಬೆಳೆ ಬೆಳೆಯಲು ಹಾಗೂ ವಿದ್ಯಾರ್ಥಿಗಳಿಗೆ ಓದಲು, ಬರೆಯಲು 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಒದಗಿಸಬೇಕು. ತಾಲೂಕಿನ ರಸ್ತೆ ಬದಿಯಲ್ಲಿ ನಡೆಯುವ ಸಂತೆಯನ್ನು ಕಾಲ ವಿಳಂಬ ಮಾಡದೆ ತಕ್ಷಣ ಜಾಗ ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ.
ಆಲೂರು ತಾಲೂಕು ಮಟ್ಟದಲ್ಲಿ ರೈತನ ಬೆಳೆಗೆ ಖರೀದಿ ಕೇಂದ್ರ ತೆರೆಯಬೇಕು. ಮನೆ ಕಟ್ಟುವವರಿಗೆ ಮರಗಳನ್ನು ಕೊಡಬೇಕು. ಸರ್ಕಾರದಿಂದ ಗ್ರಾಮ ಪಂಚಾಯ್ತಿಯಲ್ಲಿ ಕೊಡುತ್ತಿರುವ ಬಸವ ವಸತಿ, ಅಂಬೇಡ್ಕರ್, ಇಂದಿರಾ ಆವಾಜ್ ಮನೆಗಳಿಗೆ ಪುಕ್ಕಟ್ಟೆಯಾಗಿ ಮರಳನ್ನು ಕೊಡಬೇಕು. ಗ್ರಾಮ ಪಂಚಾಯ್ತಿಯಲ್ಲೇ ವಾಸಸ್ಥಳ, ಪತ್ರ ಕೊಡಬೇಕೆಂದು ಆಗ್ರಹಿಸಿದ್ದಾರೆ.