ಸ್ಪರ್ಧೆ ಎಲ್ಲಿ, ಪಕ್ಷ ನಿರ್ಧರಿಸುತ್ತೆ
ಹಾಸನ: ಯುದ್ಧಕ್ಕೆ ಹೆದರಿ ಓಡುವ ಜಾಯಮಾನ ನನ್ನದಲ್ಲ. ರಾಜಿ ಆಗಿದ್ದರೆ ಪ್ರಧಾನಿಯಾಗಿ 5 ವರ್ಷ ಮುಂದುವರಿಯುವುದು ಕಷ್ಟವಾಗುತ್ತಿರಲಿಲ್ಲ. ಮುಂದೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ನಾನು ನಿಲ್ಲುವುದು ಖಚಿತ. ಎಲ್ಲಿ ನಿಲ್ಲಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಅಥವಾ ಹಾಸನ ದಲ್ಲಿ ನಿಲ್ಲಬೇಕೋ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಅಖಾಡಕ್ಕೆ ಇಳಿಯುತ್ತೇನೆ ಎಂದ ಮೇಲೆ ಎಲ್ಲಾದರೂ ನಿಲ್ಲಲೇ ಬೇಕಲ್ಲಾ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಶಕ್ತಿ ಕುಂದಿದೆಯೇ?: ರಾಜ್ಯದ 28 ಸ್ಥಾನಗಳಲ್ಲೂ ಜೆಡಿಎಸ್, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ತೀವ್ರ ಹೋರಾಟ ನಡೆಸಲಿದ್ದು, ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋತು ಹೋಯ್ತು, ಗೌಡ ಸತ್ತ ಎಂದೆಲ್ಲಾ ಬಿಂಬಿಸಲಾಯಿತು. ಈಗ ಪರಿಸ್ಥಿತಿ ಏನಾಗಿದೆ. ಜೆಡಿಎಸ್ನ ಹೋರಾಟ ಶಕ್ತಿ ಕುಂದಿದೆಯೇ ಎಂದು ಗೌಡರು ಪ್ರಶ್ನಿಸಿದರು.
ಸವಾಲು: 1978ರಲ್ಲಿ ದಿ. ಇಂದಿರಾಗಾಂಧಿ ಅವರು ಚಿಕ್ಕಮಗಳೂರು ರೇಲ್ವೆ ಮಾರ್ಗ ನಿರ್ಮಾಣವಾಗುವುದು ಎಂದು ಭರವಸೆ ನೀಡಿ, ಶಂಕುಸ್ಥಾಪನೆ ಮಾಡಿದರು.
ಇಂದಿಗೂ ಏನು ಆಗಿಲ್ಲ. 17 ವರ್ಷಗಳಾದರೂ ಬೆಂಗಳೂರು- ಹಾಸನ- ಮಂಗಳೂರು ರೇಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.
ರಾಜ್ಯದ 17 ರೇಲ್ವೆ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದವರು ಯಾರು ಎಂಬುದನ್ನು ಕಾಂಗ್ರೆಸ್ ಮಹಾಶಯರು ಹೇಳಲಿ ಎಂದು ಗೌಡರು ಸವಾಲು ಹಾಕಿದರು.