'ಹಳ್ಳಿಗರಲ್ಲಿ ವಿಶ್ವಾಸ ತುಂಬಲು ಕೂಂಬಿಂಗ್'
ಹಾಸನ: ಸಕಲೇಶಪುರ ವಿಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಎಲ್ಲಾ ಕಡೆ ಹಳ್ಳಿಗಳ ಜನರಲ್ಲಿ ವಿಶ್ವಾಸವನ್ನು ತುಂಬುವುದಕ್ಕಾಗಿ ನಕ್ಸಲ್ ನಿಗ್ರಹ ಪಡೆ ಮತ್ತು ಹಾಸನ ಜಿಲ್ಲೆಯ ಆಂಟಿ ನಕ್ಸಲ್ ಸ್ಕ್ವಾಡ್ನೊಂದಿಗೆ ಜಂಟಿಯಾಗಿ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಈ ಕಾರ್ಯಾಚರಣೆಯನ್ನು ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟದ ಅಂಚಿನ ಬಿಸಿಲೆ, ಯಡಕುಮೇರಿ, ಹೊಂಗಡಹಳ್ಳ, ಮಾಯನೂರು, ಹೊನ್ನಾಟ್ಲು, ವಣಗೂರು, ಪಟ್ಲ, ಮಾಗೇರಿ, ಹಡ್ಲುಗದ್ದೆ, ಹುದಿನೂರು, ಮಾಲ್ಮನೆ, ದುದ್ದವಳ್ಳಿ, ಅತ್ತಿಹಳ್ಳಿ, ಕಾಗಿನಹರೆ, ಸಿಂಕೇರಿ ಸೇರಿದಂತೆ ಕಾಡಿನ ಅಂಚಿನಲ್ಲಿರುವ ಸುಮಾರು 20 ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ನಕ್ಸಲ್ ಚಟುವಟಿಕೆ ಕಂಡು ಬಂದಿಲ್ಲ ಎಂದು ಎಸ್ಪಿ ಚನ್ನಣ್ಣನವರ ತಿಳಿಸಿದ್ದಾರೆ.
ಸಹಯೋಗದೊಂದಿಗೆ ರಚನೆ: ಸಕಲೇಶಪುರ ವಿಭಾಗದ ಹಿಂದುಳಿದ ಹಳ್ಳಿಗಳ ಹಾಗೂ ಜನರ ಅಭಿವಣದ್ಧಿಗಾಗಿ ತಾಲ್ಲೂಕು ಮಟ್ಟದಲ್ಲಿ ಒಂದು ಸಮನ್ವಯ ಸಮಿತಿಯನ್ನು 13 ನಾನಾ ಇಲಾಖೆಗಳಾದ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ, ನೀರಾವರಿ ಇಲಾಖೆ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಚೆಸ್ಕಾಂ, ಕೆಎಸ್ಆರ್ಟಿಸಿ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಈ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ರಚಿಸಲಾಗಿದೆ.
ಇದರಲ್ಲಿ ಪ್ರತಿಯೊಂದು ಇಲಾಖೆಯಿಂದ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಿ, ಆ ಪ್ರತಿನಿಧಿಗಳು 15 ದಿನಗಳಿಗೊಮ್ಮೆ ಸಕಲೇಶಪುರ ವಿಭಾಗದ ಹಿಂದುಳಿದ ಹಳ್ಳಿಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಾರೆ.
ಈ ಎಲ್ಲಾ ಗಡಿ ಹಳ್ಳಿಗಳಲ್ಲಿ 20-25 ಅಂಶಗಳನ್ನೊಳಗೊಂಡ ಸೂಚನಾ ಫಲಕಗಳನ್ನು ಹಾಕಲಾಗಿದ್ದು, ಎಲ್ಲಾ ಪೊಲೀಸ್ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ನಂಬರ್ಗಳನ್ನುನಮೂದಿಸಲಾಗಿರುತ್ತದೆ. ಪ್ರತಿ ಹಳ್ಳಿಯಲ್ಲಿ 5 ಜನ ಬೀಟ್ ಸದಸ್ಯರನ್ನು ನೇಮಿಸಿಕೊಂಡು, ಸರಹದ್ದಿನ ಗಸ್ತು ಸಿಬ್ಬಂದಿಗಳು ಸದಾ ಸಂಪರ್ಕದಲ್ಲಿಟ್ಟುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ.
ಹಾಗೆಯೇ, ಮುಂಬರುವ ದಿನಗಳಲ್ಲಿ ಫೆ. 15ರೊಳಗೆ ಬೇಲೂರು ತಾಲ್ಲೂಕಿನಲ್ಲಿ ಇಂಥವುದೇ ಸಮಿತಿಯನ್ನು ರಚಿಸಿ ಕಾರ್ಯೋನ್ಮುಖರಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳು ಇದ್ದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣವೇ ಠಾಣಾಧಿಕಾರಿ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳು ಅಥವಾ ಪೊಲೀಸ್ ಅಧೀಕ್ಷಕರಿಗೆ ನೇರವಾಗಿ ಕರೆ ಮಾಡಲು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮನವಿ ಮಾಡಿದ್ದಾರೆ.