ಅಧಿಕಾರಿಗಳ ಗೈರು; ಶಾಸಕರ ಗರಂ
ಕ.ಪ್ರ. ವಾರ್ತೆ ಅರಸೀಕೆರೆ ಫೆ 2ತಾಲೂಕಿನ ಬರ ಪರಿಸ್ಥಿತಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಸಭೆಗೆ ಗೈರು ಹಾಜರಾದರೆ ಸಂಕಷ್ಟದಲ್ಲಿ ಇರುವ ಸಾಮಾನ್ಯ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಹೇಗೆ ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಷಾದಿಸಿದ್ದಾರೆ.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹರಿಹಾಯ್ದ ತಾಲೂಕು ತಹಸೀಲ್ದಾರ್ ಸೇರಿದಂತೆ ಇನ್ನಿತರ 12 ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಾಗಿದ್ದ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸತತ ಬರಗಾಲ ಪೀಡಿತ ಪ್ರದೇಶವಾದ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಅಧಿಕಾರಿಗಳೇ ಸಭೆಗೆ ಗೈರು ಹಾಜರಾದರೇ ಸಮಸ್ಯೆಗಳ ಪರಿಹಾರ ಮಾರ್ಗವನ್ನು ಕಂಡು ಕೊಳ್ಳುವುದು ಹೇಗೆ ಎಂಬುದನ್ನು ಪ್ರಶ್ನಿಸಿದರು. ತಹಸೀಲ್ದಾರ್ ಸಮರ್ಥನೆ: ನಂತರ ಸಭೆಗೆ ಹಾಜರಾದ ಉಪ ತಹಸೀಲ್ದಾರ್ ಭಾಗ್ಯಮ್ಮ ಮಾತನಾಡಿ, ಹೊಸದಾಗಿ ಸರ್ಕಾರ ಬರ ಪರಿಹಾರ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ, ತಹಸೀಲ್ದಾರ್ ಕೇಶವಮೂರ್ತಿ ಅವರು ಜಿಲ್ಲಾಧಿಕಾರಿ ಹಾಸನದಲ್ಲಿ ಕರೆದಿರುವ ಸಭೆಗೆ ಭಾಗವಹಿಸಲು ತೆರಳಿದ್ದಾರೆ ಎಂದು ಸಮಾಜಾಯಿಷಿ ನೀಡಿದರು. ಸೆಸ್ಕಾಂ ಅಧಿಕಾರಿಗಳಿಗೆ ಸೂಚನೆ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಕಾರಣ ಗ್ರಾಮಗಳ ಕುಡಿಯುವ ನೀರಿನ ಕೊಳವೆ ಬಾವಿಗಳಿಂದ ಸುಮಾರು 500 ಮೀಟರ್ ದೂರದ ಒಳಗೆ ಖಾಸಗಿ ವ್ಯಕ್ತಿಗಳು ಯಾರಾದರೂ ಕೊಳವೆ ಬಾವಿಗಳನ್ನು ಕೊರೆಸಲು ಅಧಿಕಾರಿಗಳು ಅವಕಾಶ ನೀಡಬಾರದು, ಆಕಸ್ಮಿಕವಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ಸ್ಂಪರ್ಕವನ್ನು ಬೇಸಿಗೆ ಕಾಲ ಕಳೆಯುವ 6 ತಿಂಗಳ ಕಾಲ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಶಾಸಕರು ಜಿಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗೂ ಮತ್ತು ಸೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಪಂ ಸದಸ್ಯರಾದ ಪುಟ್ಟನಕಟ್ಟೆ ದಿನೇಶ್, ಜಯಣ್ಣ, ಬಾಣಾವರ ರವಿ, ಸುಧಾಕರ್ ಹನುಮೇಗೌಡ, ಸೂಳೇಕೆರೆ ಶಿವಕುಮಾರ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ವಸಂತ ಹೊನ್ನಪ್ಪ, ತಾಪಂ ಇಒ ಟಿ.ಎನ್.ಮೂರ್ತಿ ಹಾಗೂ ಇನ್ನಿತರ ನಾನಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.ಬರ ಪರಿಹಾರ ಕೈಗೊಳ್ಳಿಬರ ಪರಿಹಾರ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಳ್ಳಲು ಸರ್ಕಾರ ಯಾವ ಯಾವ ಯೋಜನೆಗಳ ಮೂಲಕ ಎಷ್ಟು ಅನುದಾನ ನೀಡಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಕೊಳವೆ ಬಾವಿಗಳನ್ನು ಕೊರೆಸಲು ಸರ್ಕಾರ ಎಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿಯನ್ನು ಸಭೆಗೆ ನೀಡಬೇಕಾದ ತಾಲೂಕು ತಹಸೀಲ್ದಾರ್ ಏಕೆ ಸಭೆಗೆ ಗೈರು ಹಾಜರಾಗಿದ್ದಾರೆ, ಅವರನ್ನು ಈ ಸಭೆಗೆ ತಕ್ಷಣ ಕರೆಸಬೇಕೆಂದು ತಾಪಂ ಇಒ ಅವರಿಗೆ ಸೂಚನೆ ನೀಡಿದರು.ಸರ್ವಾನುಮತದ ನಿರ್ಣಯಇಂದಿನ ಸಭೆಗೆ ಸಕಾರಣ ಇಲ್ಲದೆ ಗೈರು ಹಾಜರಾದ ಇಲಾಖೆ ಅಧಿಕಾರಿಗಳ ಮೇಲೆ ಕಾನೂನು ಕ್ರಮಗಳನ್ನು ಜರುಗಿಸುವಂತೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗಿಕರಿಸಿ ಸರ್ಕಾರಿ ಆಡಳಿತ ನಿಯಂತ್ರಣ ಮಂಡಲಿಗೆ ಸೂಕ್ತ ಕ್ರಮಕ್ಕೆ ಕಳುಹಿಸುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಸಭೆಯಲ್ಲಿ ತಿಳಿಸಿದರು