ಆಶಾ ಕಾರ್ಯಕರ್ತೆಯರ ಸಂಕಷ್ಟ ನಿವಾರಿಸಿ
ಕನ್ನಡಪ್ರಭ ವಾರ್ತೆ ಹಾಸನ. ಫೆ 2
ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ಆಶಾ ಕಾರ್ಯಕರ್ತೆಯರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭಾನುವಾರ ಅಖಿಲ ಭಾರತ ಯುಟಿಯುಸಿ ವತಿಯಿಂದ ನಡೆದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು. ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ಸರ್ಕಾರ ಅಳಿಸಿ ಹಾಗುವ ಮೂಲಕ ಎಸ್ಮಾ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರಿಂದ ಕಾರ್ಮಿಕರು ಪ್ರತಿಭಟನೆ ನಡೆಸದಂತೆ ಸರ್ಕಾರ ಕಾಯ್ದೆ ಜಾರಿಗೆ ತರುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಸೌಕರ್ಯ ಇಲ್ಲದಿದ್ದರೂ ಹೆಚ್ಚಿನ ಹೊಣೆ: ಆಶಾ ಕಾರ್ಯಕರ್ತರನ್ನು ಆರೋಗ್ಯ ಇಲಾಖೆಯಲ್ಲಿ ನೇಮಿಸಿಕೊಂಡು ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ಸೌಕರ್ಯಗಳನ್ನು ನೀಡದೆ ಕೆಲಸವನ್ನು ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಕಾರ್ಯಕರ್ತೆಯರು ಇಲಾಖೆಯಲ್ಲಿ ಅಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತ ಆರೋಗ್ಯ ಇಲಾಖೆ ತಿಳಿಸಿದ್ದರೂ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ರು. 24 ಕೋಟಿ ಬಿಡುಗಡೆ: ಆಶಾ ಕಾರ್ಯಕರ್ತೆಯರ ವೇತನವನ್ನು ಕಾರ್ಮಿಕ ಕಾಯ್ದೆ ಅನ್ವಯ ಹೆಚ್ಚಳ ಮಾಡುವಂತೆ, ಕೆಲಸ ಖಾಯಂ ಗೊಳಿಸುವುಂತೆ ಸರ್ಕಾರಕ್ಕೆ ಒತ್ತಡ ಹಾಕಲಾಗಿದ್ದು, ವಿವಿಧ ಸಮಸ್ಯೆಯನ್ನು ಬಗೆ ಹರಿಸುವ ಸಲುವಾಗಿ ಈಗಾಗಲೇ ರು. 24 ಕೋಟಿ ಬಿಡುಗಡೆ ಮಾಡಿದೆ ಎಂದರು.
ಹಲವಾರು ಕಡೆಗಳಲ್ಲಿ ಹೆರಿಗೆ ದೃಢೀಕರಣ ಪತ್ರಕ್ಕೆ ಆಶಾ ಕಾರ್ಯಕರ್ತೆಯರು ಹಲವಾರು ಬಾರಿ ಅಲೆದಾಡುವಂತೆ ಕಿರುಕುಳ ನೀಡಲಾಗುತ್ತಿದೆ. ದೃಢೀಕರಣದ ಅಗತ್ಯವಿಲ್ಲದೆ ಪ್ರೋತ್ಸಾಹಧನ ನೀಡಬಹುದೆಂಬ ಆದೇಶವನ್ನು ಕಡೆಗಣಿಸಲಾಗುತ್ತಿದೆ.
ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಇರುವ ವಿಶ್ರಾಂತಿ ಕೊಠಡಿ ವ್ಯವಸ್ಥೆ ಆಗಿಲ್ಲ. ಪ್ರತಿ ತಿಂಗಳು ನಿಗದಿತ ದಿನಾಂಕದಂದು ಮಾಸಿಕ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಮಾತನಾಡಿ, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಬಂಡವಾಳಶಾಹಿ, ಕೈಗಾರಿಕೆ ಹಾಗೂ ಶ್ರೀಮಂತರ ಹಿತ ಕಾಯುವ ಸಲುವಾಗಿ ಸಾರ್ವಜನಿಕರ ಹಿತಾಶಕ್ತಿ ಕಡೆಗಣಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮತ್ತಷ್ಟು ಒಗ್ಗಟ್ಟಾಗಬೇಕಿದೆ ಎಂದು ಕಿವಿಮಾತು ಹೇಳಿದರು.ಸಿಐಟಿಯು ರಾಜ್ಯ ನಾಯಕ ಎಂ.ಎನ್. ಶಶಿಧರ್ ಮಾತನಾಡಿದರು.
ಜಿಲ್ಲಾ ಮುಖಂಡೆ ಸರ್ವಮಂಗಳ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷೆ ಬೇಬಿ ಮಹಾಲಕ್ಷ್ಮಿ, ಅರಸೀಕೆರೆ ತಾಲೂಕು ಅಧ್ಯಕ್ಷೆ ಪಂಕಜ, ಸಕಲೇಶಪುರ ತಾಲೂಕು ಅಧ್ಯಕ್ಷೆ ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಕಾರ್ಯಕರ್ತೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಹೋರಾಟಕ್ಕೆ ಫಲ ಇದ್ದೇ ಇದೆ
ಕೇಂದ್ರ ಸರ್ಕಾರವು ನೀಡುತ್ತಿರುವ ಪ್ರೋತ್ಸಾಹಧನಕ್ಕೆ ರಾಜ್ಯ ಸರ್ಕಾರ ಸರಿಸಮ ಪ್ರೋತ್ಸಾಹಧನ ನೀಡಲು ಆದೇಶವಾಗಿದ್ದು, ಕೂಡಲೇ ಅಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಲಭ್ಯವಾಗಲಿದೆ. ಆಶಾ ಕಾರ್ಯಕರ್ತರು ತಮ್ಮ ಸತತ ಹೋರಾಟದಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹನ ಧನಕ್ಕೆ ಸರಿಸಮವಾಗಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.