ಕಡ್ಡಾಯ ಶಿಕ್ಷಣಕ್ಕಾಗಿ ಕಾಂಗ್ರೆಸ್ ಅಭಿಯಾನ
ಸಕಲೇಶಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಸಮರ್ಪಕ ಅನುಷ್ಠಾನಕ್ಕಾಗಿ ಯುವ ಕಾಂಗ್ರೆಸ್ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ ತಿಳಿಸಿದ್ದಾರೆ.
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ಕಾರಣ ಹಾಗೂ ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಯ ಬಗ್ಗೆ ಪ್ರಚಾರ ಪಡಿಸದ ಪರಿಣಾಮ, ರಾಜ್ಯದಲ್ಲಿ 37 ಸಾವಿರ ಉಚಿತ ಸೀಟು ಖಾಲಿ ಉಳಿಯುವಂತಾಗಿದೆ ಆದ್ದರಿಂದ ಈ ಬಾರಿ ವಿದ್ಯೆಹಸ್ತ ಎಂಬ ಹೆಸರಿನಡಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆದೇಶದಂತೆ ತಾಲೂಕಿನಲ್ಲಿ ಈ ಬಗ್ಗೆ ಜಾಗೃತಿ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಅವರಣದಲ್ಲಿ ಈ ಜಾಗೃತಿ ಮೂಡಿಸಲು ಕೊಠಡಿ ತೆರೆದು ಪೋಷಕರಿಗೆ ಬೇಕಾಗುವ ಮಾಹಿತಿ ನೀಡಲಾಗುವುದು ಎಂದರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಇಕ್ಪಾಲ್, ಮಾಜಿ ಅಧ್ಯಕ್ಷ ಲೋಹಿತ್ ಕೌಡಳ್ಳಿ, ಯೊಗೇಶ್ ಇತರರು ಇದ್ದರು.