ಜನಸಂಖ್ಯೆಗೆ ಅನುಗುಣವಾಗಿ ಹೇಮಾವತಿ ಕುಡಿವ ನೀರು ಯೋಜನೆ: ಸಚಿವ ಸೊರಕೆ
ಹಾಸನ: ಹಾಸನ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 2045ನೇ ಇಸವಿಗೆ ಆಗಬಹುದಾದ ಜನಸಂಖ್ಯೆಗೆ ಅನುಗುಣವಾಗಿ ಹೇಮಾವತಿ ನದಿ ಮೂಲವಾಗಿಟ್ಟುಕೊಂಡು ಕುಡಿಯುವ ನೀರಿನ ಸರಬರಾಜು ಯೋಜನೆಯನ್ನು ರು. 432.00 ಕೋಟಿ ಅಂದಾಜು ವೆಚ್ಚದಲ್ಲಿ ತಯಾರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಸದಸ್ಯ ಪಟೇಲ್ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಯಲ್ಲಿ ಹಾಸನ ನಗರಕ್ಕೆ ಹೊಂದಿಕೊಂಡಿರುವ ವಿದ್ಯಾನಗರ, ಜಯನಗರ, ಸತ್ಯಮಂಗಲ ಗ್ರಾಪಂ ಪ್ರದೇಶಗಳನ್ನೂ ಪರಿಗಣಿಸಲಾಗಿದೆ ಎಂದು ಉತ್ತರಿಸಿದರು.
ಹೇಮಾವತಿ ನದಿಯಿಂದ ಹಾಸನಕ್ಕೆ ಕುಡಿಯುವ ನೀರನ್ನು ಒದಗಿಸಲು ಹೊಸ ಯೋಜನೆಯನ್ನು ರು.432 ಕೋಟಿ ಅಂದಾಜನ್ನು ಯುಐಡಿಎಸ್ ಎಸ್ ಎಚಿಟಿ ಯೋಜನೆಯಡಿಯಲ್ಲಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 2013 ರಲ್ಲಿ ಸಲ್ಲಿಸಲಾಗಿದೆ. ಅಂದಾಜು ಅನುಮೋದನೆಯಾದ ನಂತರ ಯೋಜನೆಯನ್ನು ಜಾರಿಗೊಳಿಸಲಾಗುವುದೆಂದು ಸಚಿವರು ತಿಳಿಸಿದರು. ಅತಿಕ್ರಮಣವಾಗಿಲ್ಲ:ಹಾಸನ ತಾಲೂಕು ದೊಡ್ಡಬಸವನಹಳ್ಳಿ ಗ್ರಾಮದಲ್ಲಿರುವ ಗೋಮಾಳವನ್ನು ಯಾರೂ ಅತಿಕ್ರಮಣ ಮಾಡಿಲ್ಲ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಎಂಎಲ್ಸಿ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮದ ಲ್ಲಿ ಆರ್ಟಿಸಿಯಂತೆ ಒಟ್ಟು 93-13 ಎಕರೆ ಜಮೀನಿದ್ದು, ಕೆಐಎಡಿಬಿಗೆ ಭೂ ಸ್ವಾಧೀನವಾಗಿದ್ದು, ಉಳಿಕೆ 32-33 ಎಕರೆ ಗೋಮಾಳ ಜಮೀನಿದೆ. ಈ ಗ್ರಾಮದ ಆರ್ಟಿಸಿಯಂತೆ ಒಟ್ಟು 16-29 ಎಕರೆ ಜಮೀನಿದ್ದು, ಕೆಐಎಡಿಬಿ ಗೆ ಭೂ ಸ್ವಾಧೀನವಾಗಿದೆ.
ಸಂ.ನಂ 105ರ ಪೈಕಿ ಹೊಸ ಸ.ನಂ 168 ರಲ್ಲಿ ಒಟ್ಟು 13-09 ಎಕರೆ ಜಮೀನಿನಲ್ಲಿ 12-09 ಎಕರೆ ಕೆಐಎಡಿಬಿ ಗೆ ಭೂಸ್ವಾಧೀನವಾಗಿದ್ದು, 1-00 ಎಕರೆ ಗೋಮಾಳ ಜಮೀನಾಗಿರುತ್ತದೆ. ಗೋಮಾಳ ಭೂಮಿ ಅತಿಕ್ರಮಣವಾಗಿಲ್ಲ ಎಂದು ತಿಳಿಸಿದ್ದಾರೆ.