ಜೈನರಿಗೆ ರಕ್ಷಣೆ ನೀಡಿ: ಭುವನಕೀರ್ತಿ ಶ್ರೀ
ಹಳೇಬೀಡು: ಹೊಯ್ಸಳರ ಮೂಲನೆಲೆ ಅಂಗಡಿ ಗ್ರಾಮದಲ್ಲಿ ಜೈನರ ಮೂರು ವಿಗ್ರಹಗಳು ಕಳವಾಗಿರುವುದು ಜೈನರ ಮನಸ್ಸಿಗೆ ನೋವಾಗಿದೆ. ಹೀಗಾಗಿ, ಜೈನರಿಗೆ ರಕ್ಷಣೆಯ ಅಗ್ಯವಿದೆ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಕನಕಗಿರಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹಳೇಬೀಡಿನ ಬಸ್ತಿಹಳ್ಳಿಯ ಜೈನ ಬಸದಿಯ ಶಾಂತಿನಾಥ ಸ್ವಾಮಿಗೆ ಭಾನುವಾರ ನಡೆದ ಮಹಾ ಮಸ್ತಕಾಭೀಷೇಕ ಸಮಾರಂಭದಲ್ಲಿ ಅವರು ಮಾತನಾಡಿ, ಮೂಡುಬಿದರೆ ಘಟನೆ ಮಾಸುವ ಮೊದಲೇ ಜೈನಬಸದಿಗಳಲ್ಲಿ ಕಳವು ಪ್ರಕರಣ ನಡೆಯುತ್ತಿರುವುದು ನೋವಿನ ಸಂಗತಿ. ಜೈನರಿಗೆ ಅಲ್ಪಸಂಖ್ಯಾತ ಸ್ಥಾನ ದೊರಕಿರುವುದರಿಂದ ಸೌಲಭ್ಯ ಹರಿದು ಬರಲಿದೆ. ಆದರೆ ಹೋರಾಟ ಮಾಡದ ಅಹಿಂಸಾವಾದಿ ಜೈನರಿಗೆ ಭದ್ರತೆ ಅಗತ್ಯವಿದೆ ಎಂದರು.
ಹಾಸನ ಜೈನಸಂಘ ಅಧ್ಯಕ್ಷ ಎಂ.ಅಜಿತ್ಕುಮಾರ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ಪ್ರತಿವರ್ಷ ಜೈನ ಸಮಾವೇಶ ನಡೆಯಬೇಕು. ಮುಂದಿನ ವರ್ಷದಿಂದಲೇ ಮಠಾಧೀಶರು ಸಮಾವೇಶ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಕೂಡಲೇ ಸಮಾವೇಶ ನಡೆಸಲು ಸಿದ್ಧತೆ ಕೈಗೊಳ್ಳಲಾಗುವುದು ಎಂದರು.
ಗೋಮ್ಮಟವಾಣಿ ಸಂಪಾದಕ ಎಸ್.ಎಸ್.ಅಶೋಕ್ ಕುಮಾರ್ ಮಾತನಾಡಿ, ಜೈನ ಸಮುದಾಯ ಪ್ರಗತಿಗಾಗಿ ಮೀಸಲಿಟ್ಟ ಕೊಟ್ಯಂತರ ರುಪಾಯಿ ಹಣ ಸರ್ಕಾರದಲ್ಲಿಯೇ ಉಳಿಯುತ್ತಿದೆ. ಮುಂದಿನ ವರ್ಷದಿಂದ ಅದು ಸದುಪಯೋಗ ಆಗಬೇಕು ಎಂದರು.
ಇದೇ ವೇಳೆ ಜೈನ ಬಸದಿಯ ಶಾಂತಿನಾಥ ಸ್ವಾಮಿಗೆ ಮಹಾ ಮಸ್ತಕಾಭೀಷೇಕ ನಡೆಸಲಾಯಿತು. ಮಹಾವೀರ ಎಜುಕೇಷನ್ ಟ್ರಸ್ಟ್ನ ಎಚ್.ಸುದರ್ಶನ್, ಎಚ್.ಪಿ.ನಾಗರಾಜು, ಪ್ರಮೋದ್, ಎಸ್.ಧನುಷ್ ಮತ್ತಿತರರು ಉಪಸ್ಥಿತರಿದ್ದರು.