ಪಡಿತರ ಖಾತ್ರಿ: ಬೆ.8 ರಿಂದ ರಾ.8ರವರೆಗೆ
ಹಾಸನ: ಜಿಲ್ಲೆಯಲ್ಲಿ ಪಡಿತರ ಖಾತರಿ ಯೋಜನೆ ಫೆ.1 ರಿಂದ ಜಾರಿಯಾಗಿದ್ದು, ಯೋಜನೆಯನ್ವಯ ಇನ್ನು ಮುಂದೆ ಪ್ರತಿ ತಿಂಗಳು ಪಡಿತರ ಚೀಟಿದಾರರು ತಮ್ಮ ಪಡಿತರವನ್ನು 1ರಿಂದ 10 ರೊಳಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ (ಮ.1ರಿಂದ 2 ಊಟದ ಸಮಯ) ಪಡಿತರ ಪಡೆಯಬಹುದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಪಡಿತರ ಚೀಟಿದಾರರು ಪಡಿತರ ಪಡೆಯುವ ಮುನ್ನ ತಾವು ಪಡಿತರ ಪಡೆದ ಪ್ರಮಾಣದ ಬಗ್ಗೆ ನ್ಯಾಯಬೆಲೆ ಅಂಗಡಿಯಲ್ಲಿ ಇಟ್ಟಿರುವ ನಮೂನೆಯಲ್ಲಿ ತಮ್ಮ ಪಡಿತರ ಚೀಟಿ ಸಂಖ್ಯೆ ನಮೂದಿಸಿ, ಪಡೆದ ಪಡಿತರ ಪ್ರಮಾಣವನ್ನು ನಮೂದಿಸಿ, ನಮೂನೆಯಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು ಎಂದು ಕಿವಿಮಾತು ಹೇಳಿದರು. ಎರಡನೇ ಹಂತದಲ್ಲಿ ಪ್ರತಿ ತಿಂಗಳ 11ರಿಂದ ಬೆಳಗ್ಗೆ 8ರಿಂದ ಮ.12 ಹಾಗೂ ಸಂಜೆ 4 ರಿಂದ 8ರ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಪಡೆಯಬಹುದಾಗಿದೆ. ವಿತರಣೆ ಪೂರ್ಣ ಮುಗಿದ ನಂತರ ಅಥವಾ ತಿಂಗಳ ಕೊನೆಯ ದಿನಾಂಕದವರೆಗೆ ಯಾವುದು ಮೊದಲು ಬರುತ್ತದೋ ಅಲ್ಲಿಯವರೆಗೆ ಪಡಿತರ ಪಡೆಯಬಹುದಾಗಿದೆ ಎಂದರು.
ಏಡ್ಸ್ ಜನ ಜಾಗೃತಿ ಜಾಥಾ, ಮೆರವಣಿಗೆ
ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಜನ ಜಾಗೃತಿ ಜಾಥಾ, ಕಾರ್ಯಕ್ರಮ ಮತ್ತು ಎಚ್ಐವಿ-ಏಡ್ಸ್ ತಡೆಗಟ್ಟುವಲ್ಲಿ ಯುವಜನರ ಪಾತ್ರ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಂ.ಎಸ್. ಸಂಪತ್ಕುಮಾರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನರು ಸುರಕ್ಷತೆ ಮತ್ತು ಆರೋಗ್ಯಕರ ಜೀವನ ಶೈಲಿ ರೂಢಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಾದ ಪ್ರತಾಪ್,ಉಮೇಶ್, ಪ್ರೀತಿ, ಗಂಗಮ್ಮ ರಶ್ಮಿ, ಚೈತ್ರ, ಪಲ್ಲವಿ, ಶೃತಿ, ನಿಶ್ಚಿತ ಸೇರಿದಂತೆ ಹಲವರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಪ್ರತಾಪ್-ಉಮೇಶ್ ತಂಡದವರು ಎಚ್ಐವಿ-ಏಡ್ಸ್ ಜಾಗೃತಿ ಮೂಡಿಸುವ ಕಿರುನಾಟಕ ಪ್ರದರ್ಶಿಸಿದರು. ಉಪನ್ಯಾಸಕರಾದ ಮಂಜುನಾಥ್, ಬೋರಯ್ಯ, ರವಿಕುಮಾರ್, ನವೀನ್ ಇದ್ದರು.
20 ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ
ಹಾಸನ: ಹಾಸನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.20 ರಂದು ತಾಲೂಕಿನ ಗೊರೂರು ಗ್ರಾಮದಲ್ಲಿ ನಡೆಸಲು ತಾಲೂಕು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನು ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಹಾಸನ ತಾಲೂಕು ಅಧ್ಯಕ್ಷ ತಮ್ಮೇಶ್ ತಿಳಿಸಿದ್ದಾರೆ.