ಶೇ. 38 ರಷ್ಟು ಭ್ರಷ್ಟರಿಗೆ ಶಿಕ್ಷೆ: ಲೋಕಾಯುಕ್ತ ಎಡಿಜಿಪಿ ರಾವ್
ಹಾಸನ: ಲೋಕಾಯುಕ್ತ ಬಲೆಗೆ ಬಿದ್ದ ಶೇ. 38ರಷ್ಟು ಸರ್ಕಾರಿ ಅಧಿಕಾರಿ, ನೌಕರರಿಗೆ ನ್ಯಾಯಾಲಯದ ಶಿಕ್ಷೆ ಆಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಶೇ. 65ರಷ್ಟು ಮಂದಿಗೆ ಶಿಕ್ಷೆ ಆಗಿದೆ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.
ಭ್ರಷ್ಟಾಚಾರದ ಆರೋಪದ ಮೇಲೆ ಸಿಕ್ಕಬಿದ್ದು, ವಿಚಾರಣೆಯಲ್ಲಿ ಅಪರಾಧಿ ಎಂದು ಸಾಬೀತಾದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಶಿಕ್ಷೆ ಆಗುತ್ತಿಲ್ಲ ಎಂಬುದು ಒಪ್ಪುವಂಥದ್ದಲ್ಲ. ಪ್ರಸ್ತುತ ವಿಚಾರಣೆ ತ್ವರಿತವಾಗಿ ನಡೆದು ನ್ಯಾಯಾಲಯದಿಂದ ಶಿಕ್ಷೆಗೆ ಒಳಪಡುವ ಮಂದಿಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಮರ್ಥಿಸಿಕೊಂಡರು.
ಲೋಕಾಯುಕ್ತರ ಪತ್ರ: ಭ್ರಷ್ಟಾಚಾರ ಆರೋಪ ಹೊತ್ತ ರಾಜ್ಯದ 94 ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಎಫ್ಐಆರ್ ಸಲ್ಲಿಸಲು ಲೋಕಾಯುಕ್ತರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸದ್ಯದಲ್ಲೇ ಅನುಮತಿ ನೀಡುವ ಸಾಧ್ಯತೆಗಳಿವೆ. ಮುಖ್ಯ ಕಾರ್ಯದರ್ಶಿಗಳು ಪತ್ರ ತಲುಪಿದೆ ಎಂದು ಹೇಳಿದ್ದಾರೆ. ಅನುಮತಿ ನೀಡದಿದ್ದರೆ ರಾಜ್ಯಪಾಲರು, ಲೋಕಾಯುಕ್ತರು ತಮ್ಮ ಮುಂದೆ ನಡೆ ಬಗ್ಗೆ ನಿರ್ಧರಿಸುವರು ಎಂದು ಹೇಳಿದರು.
ಸೆರೆ ಕಾರ್ಯ ಜಾರಿಯಲ್ಲಿ: ಲೋಕಾಯುಕ್ತಕ್ಕೆ ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಇಂಥವರಿಂದ ಭ್ರಷ್ಟಾಚಾರ ನಿರ್ಮೂಲನಾ ಕಾರ್ಯ ಕಷ್ಟ ಎಂದು ಹೇಳಲಾಗುತ್ತಿದೆ. ಲೋಕಾಯುಕ್ತಕ್ಕೆ ಪೊಲೀಸ್ ಅಧಿಕಾರಿಯ ಸೇವೆ ಗುಣಮಟ್ಟ, ನಡತೆ ಎಲ್ಲವನ್ನೂ ಅಧ್ಯಯನ ಮಾಡಿಯೇ ನೇಮಕ ಮಾಡಿಕೊಳ್ಳಲಾಗುತ್ತದೆ. ಆಧುನಿಕ ಉಪಕರಣಗಳ ಮೂಲಕ ಭ್ರಷ್ಟರನ್ನು ಸೆರೆ ಹಿಡಿಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಇನ್ಸ್ಪೆಕ್ಟರ್ಗಳ ಕೊರತೆ: ಲೋಕಾಯುಕ್ತದಲ್ಲಿ 48 ಇನ್ಸ್ಪೆಕ್ಟರ್ಗಳ ಕೊರತೆ ಇದ್ದು, ಶೀಘ್ರದಲ್ಲೇ ನೇಮಕ ಆಗಲಿದೆ. ಕೆಲವರು ಬಡ್ತಿ ಹೊಂದಿದ್ದರಿಂದ ವರ್ಗಾವಣೆ ಆದರು. ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಾಡುವ ಬಗ್ಗೆ ಲೋಕಾಯುಕ್ತ ಪ್ರತಿನಿಧಿಸುವ ವಕೀಲರಿಗೆ ತಿಳಿಸಲಾಗಿದೆ. ವಾದ ಮಂಡನೆ ಪ್ರಬಲವಾಗಿ ನಡೆಯಬೇಕು ಎಂದರು