'ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸುವುದೇ ಸಾರ್ಥಕತೆ'
ಹಾಸನ: ಎಲ್ಲರೂ ಸಮುದಾಯದ ಜನರ ನಡುವೆ ಜೀವಿಸಬೇಕಾಗಿರುವುದರಿಂದ ಜನರ ಕಷ್ಟಗಳಿಗೆ ಸ್ಪಂದಿಸಿದರೆ ಮಾತ್ರ ಬದುಕಿಗೆ ನಿಜವಾದ ಅರ್ಥ ಬರುತ್ತದೆ ಎಂದು ಎಲ್ ಅಂಡ್ ಟಿ ಕಂಪನಿ ಯೋಜನಾ ವ್ಯವಸ್ಥಾಪಕ ವಿ.ಜೆ.ರಾಜು ನುಡಿದರು.
ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ ವತಿಯಿಂದ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆ ರಕ್ತನಿಧಿ ವಿಭಾಗ ಸಹಕಾರದಲ್ಲಿ ಕೈಗಾರಿಕಾ ಪ್ರದೇಶದ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ ಪುರುಷೋತ್ತಮ್ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಕಾರ್ಯ ತತ್ಪರತೆ, ಜ್ಞಾಪಕ ಶಕ್ತಿವೃದ್ಧಿ ಯಾಗುತ್ತದೆ. ರಕ್ತದೊತ್ತಡ ಕಡಿಮೆಯಾಗಿ ಶೇ. 80 ಭಾಗ ಹೃದಯಾಘಾತ ತಡೆಯಬಹುದು ಎಂದರು.
ಇದೇ ವೇಳೆ 44 ಮಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಡಾ.ಭಾಗ್ಯಶ್ರೀ, ಹರೀಶ್, ಮಹೇಶ್ಕುಮಾರ್, ಜಯರಾಂ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್. ಶಿವಸ್ವಾಮಿ ರಕ್ತ ಸಂಗ್ರಹಣಾ ಕಾರ್ಯದಲ್ಲಿ ಇದ್ದರು. ರಾಷ್ಟ್ರೀಯ ಸೇವಾ ಕಾರ್ಯಕರ್ತ ಆರ್.ಜಿ. ಗಿರೀಶ್ ಸಹಕರಿಸಿದರು.