ಸಾಂಸ್ಕೃತಿಕತೆಯಿಂದ ಪ್ರತಿಭೆಗೆ ಮೆರುಗು
ಆಲೂರು: ಮಕ್ಕಳಲ್ಲಿನ ಆಂತರಿಕ ಪ್ರತಿಭಾ ಶಕ್ತಿಯನ್ನು ಹೊರಗೆಳೆದು ಅದಕ್ಕೊಂದು ರೂಪು ಕೊಡುವುದು ಸಾಂಸ್ಕೃತಿಕ ಕಾರ್ಯಕ್ರಮಗಳು. ಜಾನಪದ ನೃತ್ಯ, ಗೀತಗಾಯನ ಮುಂತಾದ ಚಟುವಟಿಕೆಗಳು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿವೆ ಎಂದು ಮುಖ್ಯ ಶಿಕ್ಷಕ ಪರಾಶರಮೂರ್ತಿ ಹೇಳಿದರು. ತಾಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಾಣಿಕ್ಯ ಮತ್ತು ತಂಡದವರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗಾಗಿ ಇತ್ತೀಚೆಗೆ ನಡೆದ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೌಲ್ಯ ಬೆಳೆಸಿಕೊಳ್ಳಬೇಕಿದೆ: ಮಕ್ಕಳಲ್ಲಿನ ಪ್ರತಿಭೆ, ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ರಾಜ್ಯದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹತ್ತರ ಹೆಜ್ಜೆ ಇಟ್ಟಿದೆ. ನಾಡಿನ ಮೂಲ ಜಾನಪದ ಸೊಗಡು ಪಸರಿಸುವಲ್ಲಿ ಉತ್ತಮೋತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ.
'ಚಿಗುರು' ವರದಾನ: ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಾಡು-ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂದಾಗಬೇಕಿದೆ. ಮಗುವಿನ ಜ್ಞಾನ ಪುಸ್ತಕಕ್ಕೆ ಮಾತ್ರ ಸೀಮಿತವಾಗದೇ ಸಹಪಠ್ಯ ಚಟುವಟಿಕೆಗಳಿಂದ ವಿಕಸಿತವಾಗಬೇಕಾಗುತ್ತದೆ. ಅಂದಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯ. ಇಂತಹ ಬೆಳವಣಿಗೆ ಚಿಗುರು ಕಾರ್ಯಕ್ರಮ ವರದಾನವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾಣಿಕ್ಯ ಮತ್ತು ತಂಡದವರು ಜಾನಪದ ನೃತ್ಯ ನಡೆಸಿಕೊಟ್ಟರು. ಕಾಮತಿಕೂಡಿಗೆ ಕ್ಲಸ್ಟರ್ ಸಿಆರ್ಪಿ ಎಂ.ಬಿ. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ. ನಾಗರಾಜು, ಸಹ ಕಾರ್ಯದರ್ಶಿ ಜಿ.ಆರ್. ಮಧುರ, ಕಣತೂರು ಸಿ.ಆರ್.ಪಿ. ಕುಮಾರ್, ಅಧ್ಯಕ್ಷ ಕಾಂತರಾಜು, ಊರಿನ ಮುಖಂಡರಾದ ನಂಜಪ್ಪ, ಹಾಲೇಗೌಡ ಮುಂತಾದ ಗಣ್ಯರು ಚಿಗುರು ಕಾರ್ಯಕ್ರಮ ಕುರಿತು ಮಾತನಾಡಿದರು.ದೀಪಿಕಾ ಮತ್ತು ತಂಡದವರು ಪ್ರಾರ್ಥಿಸಿದರು. ಸಹ ಶಿಕ್ಷಕರಾದ ಹೆಚ್.ಕೆ. ಮಂಜುನಾಥಚಾರ್ಯ ಕಾರ್ಯಕ್ರಮ ನಿರ್ವಹಿಸಿದರು, ನಿಂಗರಾಜು ಸ್ವಾಗತಿಸಿದರು. ಟಿ.ಎಂ. ರಮೇಶ ಎಲ್ಲರಿಗೂ ವಂದಿಸಿದರು.