ಅಕ್ರಮ ಮದ್ಯದ ಅಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ
ಹಾಸನ: ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ಕುಂಬಾರಗೆರೆ ಗ್ರಾಮಸ್ಥರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ನೀಡಿದರು.
ಸಕಲೇಶಪುರ ತಾಲೂಕಿನ ಕುಂಬಾರಗೆರೆ ಗ್ರಾಮದಲ್ಲಿ ತೀರಾ ಬಡವರಿದ್ದು, ಈಗಾಗಲೇ ಹೇಮಾವತಿ ಜಲಾಶಯಕ್ಕೆ ಜಮೀನು ಕೊಟ್ಟು ನಿರಾಶ್ರಿತರಾಗಿದ್ದೇವೆ. ಹೆಚ್ಚಿನ ಜನರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಕದ ಯಡಕೆರೆ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ದಿನಸಿ ಅಂಗಡಿಗಳಲ್ಲಿ ಮತ್ತು ಖಾಲಿ ಮಳಿಗೆಯಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿದರು.
ಅಕ್ರಮ ಮಾರಾಟ: ಅಂಗಡಿಗಳಲ್ಲಿ ಅಕ್ರಮವಾಗಿ ಬ್ರಾಂದಿ ಅಂಗಡಿ ತಲೆ ಎತ್ತಿದ್ದು, ನಮ್ಮ ಗ್ರಾಮದ ಗಂಡಸರು ಕೂಲಿ ಮಾಡಿದ ಹಣ ಹೆಂಡಕ್ಕೆ ಸುರಿಯುವಂತಾಗಿದೆ. ಇದರಿಂದ ಗ್ರಾಮದ ಮಹಿಳೆಯರು ತೊಂದರೆ ಉಂಟಾಗಿದೆ. ಗ್ರಾಮದ ಖಾಸಗಿ ಮದ್ಯದ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವ ಮೂಲಕ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಇಲ್ಲಿ ಮದ್ಯದ ಅಂಗಡಿಯನ್ನು ನಡೆಸಲು ಯಾವುದೇ ಪರವಾನಗಿ ಇಲ್ಲದಿದ್ದರೂ ಸಹ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.
ಅಶಾಂತಿ ವಾತಾವರಣ: ಈ ಮದ್ಯದ ಅಂಗಡಿಯಿಂದಾಗಿ ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸುವುದು ಆಸಾಧ್ಯವಾಗಿದೆ. ಮದ್ಯದ ಅಂಗಡಿಯಿಂದಾಗಿ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮದ ಗಂಡಸರು ಮದ್ಯದ ಅಂಗಡಿಯತ್ತ ಮುಖ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡರು.
ಒತ್ತಾಯ: ಕಷ್ಟಪಟ್ಟು ಕೂಲಿ ಮಾಡಿದ ಹಣವನ್ನೆಲ್ಲಾ ಕಳಪೆ ಮದ್ಯಕ್ಕೆ ಹಾಕುವ ಮೂಲಕ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಪರವಾನಗಿ ಇಲ್ಲದ ಅಕ್ರಮ ಮದ್ಯದ ಅಂಗಡಿಯನ್ನು ಮುಚ್ಚಿಸಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಎಚ್ಚರಿಕೆ: ಈಗಾಗಲೇ ಯಡಕೆರೆ ಗ್ರಾಮದ ನಿವಾಸಿಗಳು ಕೂಡ ಮದ್ಯದಂಗಡಿಯನ್ನು ನಿಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವ ಕ್ರಮ ಕೈಗೊಂಡಿರುವುದಿಲ್ಲ ಎಂದು ಕಿಡಿಕಾರಿದರು. ಆದ್ದರಿಂದ, ಕೂಡಲೇ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕುಂಬಾಗೆರೆ ಗ್ರಾಮದ ಧರ್ಮ, ದೇವಪ್ಪಶೆಟ್ಟಿ, ಪುಟ್ಟರಾಜ್, ನಾಗೇಶ್, ಗಿರೀಜ, ರಾಮಮ್ಮ, ಸರೋಜಾ, ಕಮಲಮ್ಮ, ಗೌರಮ್ಮ, ಮಂಜುಳ, ಸುಕನ್ಯ, ಸುಂದರಮ್ಮ, ಪಂಕಜ, ಪೂರ್ಣಿಮಾ, ಭಾರತಿ, ರೂಪ ಹಾಗೂ ಇತರರು ಇದ್ದರು.