'ಇಂದಿಗೂ ಗ್ರಾಮಗಳಿಗೆ ಮೂಲಸೌಕರ್ಯವಿಲ್ಲ'
ಸಕಲೇಶಪುರ: ದೇಶವನ್ನಾಳಿದ ಬಹುತೇಕ ಎಲ್ಲಾ ಸರ್ಕಾರಗಳು ಅಗ್ಗದ ಪ್ರಚಾರಕ್ಕೆ ಜೋತುಬಿದ್ದ ಕಾರಣದಿಂದಾಗಿ ಇಂದಿಗೂ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯಗಳಿಂದ ವಂಚಿತಗೊಳ್ಳುವಂತಾಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ವಿಷಾದಿಸಿದರು.
ಸೌಕರ್ಯ ಅಸಾಧ್ಯ: ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ಕೆ.ಜಿ.ಗೆ ಅಕ್ಕಿಯಂತಹ ಜನಪ್ರೀಯ ಯೋಜನೆಗಳಿಂದ ಜನರ ಬಡತನ ಕಡಿಮೆಯಾಗುವುದಿಲ್ಲ. ಆದರೆ, ಇಂತಹ ಜನಪ್ರಿಯ ಯೋಜನೆಗೆ ಸರ್ಕಾರದ ಬಹುತೇಕ ಹಣ ವ್ಯಯವಾಗುವುದರಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಅಸಾಧ್ಯವಾಗಿದೆ ಎಂದರು. ಹಲವು ಕಾಮಗಾರಿಗಳು: ಗ್ರಾಮದ 2.5 ಕಿ.ಮೀ. ರಸ್ತೆಯನ್ನು ನಾಬರ್ಡ್ ಯೋಜನೆಯಡಿ 62 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೇ, 2011-12 ರಾಜ್ಯ ಹೆದ್ದಾರಿಯ ಯೋಜನೆಯ ಪ್ರಥಮ ಹಂತದಲ್ಲಿ ತಾಲೂಕಿನ ಚಂಗಡಹಳ್ಳಿ-ವಣಗೂರು ನಡುವಿನ 19 ಕಿ.ಮೀ. ರಸ್ತೆ ನಿರ್ಮಾಣಮಾಡಲಾಗುತ್ತಿದ್ದರೆ 2012-13 ನೇ ಸಾಲಿನ ಎರಡನೇ ತಾಲೂಕಿನ ಬ್ಯಾದನೆ- ಕೆರೂಡಿಯ ನಡುವಿನ 33 ಕಿ.ಮೀ. ರಸ್ತೆಯನ್ನು 16.5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದಲ್ಲದೇ, ಕೆರೂಡಿ- ಚಂಗಡಿಹಳ್ಳಿ ನಡುವಿನ 16 ಕಿ.ಮೀ. ರಸ್ತೆ ಕಾಮಗಾರಿ ಸಹ ಆರಂಭವಾಗಲಿದೆ ಎಂದರು.
ಸಿ.ಆರ್.ಎಫ್.ಎಚ್.ಆರ್.ಪಿ, ನಾಬಾರ್ಡ್ ಯೋಜನೆಗಳ ಮೂಲಕ ನಾನಾ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಮುಂದಿನ ಲೋಕಸಭಾ ಚುನಾವಣೆ ಮುಗಿದ ನಂತರ ಕಾಮಗಾರಿ ಅರಂಭವಾಗಿ ಮುಂದಿನ ಮೇ ತಿಂಗಳ ಒಳಗಾಗಿ ತಾಲೂಕಿನ ಬಹುತೇಕ ರಸ್ತೆಗಳು ಕಾಮಗಾರಿ ಮುಕ್ತಾಯವಾಗಲಿದೆ ಎಂದರು.
ತಾಪಂ ಅಧ್ಯಕ್ಷೆ ಮಂಜುಳ, ಸದಸ್ಯೆ ಲೋಲಾಕ್ಷಿ, ಗ್ರಾಮದ ಮುಖಂಡರಾದ ಉದಯ್, ವೆಂಕಟ ಸುಬ್ಬಯ್ಯ, ವೈ.ಎಲ್. ಸ್ವಾಮಿ ಹಾಗೂ ಇತರರು ಇದ್ದರು.