ಇಲ್ಲಿ ಕಲಿತವರು10 ಸಾವಿರಕ್ಕೂ ಹೆಚ್ಚು
ಕ.ಪ್ರ.ವಾರ್ತೆ ಟಿ ಅರಸೀಕೆರೆ ಟಿ ಫೆ. 3
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಸುವರ್ಣ ಮಹೋತ್ಸವನ್ನಾಚರಿಸಿ ಯಶಸ್ವಿಯಿಂದ ಮುನ್ನಡೆಯುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರಶಂಸಿದರು.
ತಾಲೂಕಿನ ಜಯಚಾಮರಾಜೇಂದ್ರ (ಜೆ.ಸಿ.) ಪುರ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಇತಿಹಾಸದಲ್ಲಿಯೇ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಇದಾಗಿದ್ದು ಸರ್ಕಾರಿ ಶಾಲೆಯೆಂದರೆ ಅಲ್ಲಗಳೆಯುವ ಇಂದಿನ ದಿನಗಳಲ್ಲೂ ಯಶಸ್ವಿಯ ಮೆಟ್ಟಿಲುಗಳನ್ನು ಏರುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ಭರವಸೆ: ಸರ್ಕಾರ ಸಕಲ ಸವಲತ್ತುಗಳನ್ನು ನೀಡಿದರೂ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವವರ ಸಂಖ್ಯೆಯೇ ಹೆಚ್ಚುತ್ತಿರುವುದು ವಿಷಾಧನೀಯ ಎಂದ ಅವರು ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಸುಮಾರು 18 ಸಾವಿರ ಕೋಟಿ ರು. ಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವುದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಧ್ಯೋತಕವಲ್ಲದೆ ಬೇರೇನೂ ಅಲ್ಲ. ಶಾಲೆಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೈಕಲ್ ಸ್ಟ್ಯಾಂಡ್ ಒದಗಿಸುವುದಾಗಿ ಭರವಸೆ ನೀಡಿದರು.
ವಿವೇಕಾನಂದ ಶಿಕ್ಷಣ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಎಂ. ಕಪನೇಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆ, ಸಾಮರ್ಥ್ಯಗಳಿದ್ದು ಅದನ್ನು ಹೊರತೆಗೆಯುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಪೊಷಕರು ಕಾರ್ಯೋನ್ಮುಖರಾಗಬೇಕು: ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಸಾಮರ್ಥ್ಯವಿದೆ. ಅದನ್ನು ಹೊರಸೆಳೆಯುವ ಪ್ರಯತ್ನ ನಡೆಸಿದರೆ ಇನ್ನಷ್ಟು ಪ್ರತಿಭೆಗಳನ್ನು ಅನಾವರಣಗೊಳಿಸಬಹುದು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಪೋಷಕರು ಕಾರ್ಯೋನ್ಮುಖರಾಗಬೇಕಿದೆ ಎಂದರು.
ಸ್ವಾತಂತ್ರ್ಯ ನಂತರ ತಾಲ್ಲೂಕಿನಲ್ಲಿ ಅಸ್ಥಿತ್ವಕ್ಕೆ ಬಂದ ಕೆಲವೇ ಕೆಲವು ಶಾಲೆಗಳಲ್ಲಿ ಇದು ಕೂಡ ಒಂದಾಗಿದ್ದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತಮ್ಮ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಈ ಶಾಲೆಗೆ ಪಾಠ ಬೋಧನೆ ಬಂದಿದ್ದನ್ನು ಇದೇ ವೇಳೆ ಸ್ಮರಿಸಿಕೊಂಡರು. ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ ಶಾಲೆಯ ಸಂಸ್ಥಾಪಕ ದಿ. ಚನ್ನಬಸಪ್ಪನವರ ಭಾವಚಿತ್ರ ಅನಾವರಣಗೊಳಿಸಿದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಕಾಡಪ್ಪ, ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕರಿಸಿದ್ದಪ್ಪ, ಬಿಇಓ ನಟರಾಜ್, ಮುಖ್ಯ ಶಿಕ್ಷಕ ಪಿ.ಆರ್.ಕೆ.ನಾಯಕ್, ಎಂ.ಪಿ. ರಾಮಸ್ವಾಮಿ, ಗಂಗಾಧರಯ್ಯ, ಭದ್ರಮ್ಮ ಇದ್ದರು. ಇದೇ ವೇಳೆ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರನ್ನು ಸನ್ಮಾನಿಸಲಾಯಿತು. ಶಂಕರನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್. ರಂಗಪ್ಪ ಸ್ವಾಗತಿಸಿ, ಶಾಲೆಯ ಹಳೆಯ ವಿದ್ಯಾರ್ಥಿ ಶಂಭುಲಿಂಗಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.