ಟ್ಯಾಕ್ಸಿ ವಿತರಿಸಲು ಅರ್ಜಿ ಆಹ್ವಾನ
ಹಾಸನ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿರುದ್ಯೋಗಿ ಯುವಕರಿಗೆ ಸಹಾಯ ಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ಒದಗಿಸಲು ಅರ್ಜಿ ಆಹ್ವಾನಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಿಂದ 2013-14 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಪರಿಶಿಷ್ಟ ಜಾತಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ವಾಹನಗಳನ್ನು ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ದೃಷ್ಟಿಯಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಪ್ರವಾಸಿ ಟ್ಯಾಕ್ಸಿಗಳನ್ನು ಇಲಾಖೆಯಿಂದ ಒದಗಿಸಲು ಉದ್ದೇಶಿಸಲಾಗಿದೆ. ಪ್ರವಾಸಿ ಟ್ಯಾಕ್ಸಿಗಳಿಗೆ ತಗಲುವ ಒಟ್ಟು ವೆಚ್ಚದಲ್ಲಿ 2 ಲಕ್ಷ ರು. ಇಲಾಖೆಯಿಂದ ಸಹಾಯಧನದ ರೂಪದಲ್ಲಿ ಭರಿಸಲು, ಶೇ 5ರಷ್ಟನ್ನು ಫಲಾನುಭವಿಗಳು ಭರಿಸಲು ಹಾಗೂ ಉಳಿದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ರೂಪದಲ್ಲಿ ಒದಗಿಸಲು ನಿರ್ಧರಿಸಲಾಗಿದೆ.
ಅರ್ಹತೆಗಳು: ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಅರ್ಜಿದಾರರು 20 ರಿಂದ 45 ವರ್ಷದೊಳಗಿರಬೇಕು ಹಾಗೂ ಹಾಸನ ಜಿಲ್ಲೆಯಲ್ಲಿ ವಾಸಿಸುತ್ತಿರಬೇಕು. ಅರ್ಜಿದಾರರು ಕನಿಷ್ಟ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ ಪಡೆದು ಕನಿಷ್ಠ ಒಂದು ವರ್ಷವಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳಲ್ಲಿ ವಾಹನ ಪರವಾನಗಿ ಬ್ಯಾಡ್ಜನ್ನು ಪಡೆಯತಕ್ಕದ್ದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸಲ್ಲಿಸಬೇಕಾದ ದಾಖಲೆಗಳು: ಜಿಲ್ಲಾಧಿಕಾರಿಗಳಿಂದ ಜಾಹಿರಾತು ಪ್ರಕಟಣೆಗೊಂಡ 30 ದಿನಗಳ ಒಳಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇತ್ತೀಚಿನ ಭಾವಚಿತ್ರದೊಂದಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ನ ಪ್ರತಿ. ಚಾಲ್ತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಸೀಲ್ದಾರ್ರಿಂದ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರದ ಪ್ರತಿ. ತಹಸೀಲ್ದಾರ್ರಿಂದ ಪಡೆದುಕೊಂಡಿರುವ ಪ್ರಸಕ್ತ ಸಾಲಿನ ಆದಾಯ ಪ್ರಮಾಣ ಪತ್ರದ ಪ್ರತಿ. ತಹಸೀಲ್ದಾರ್, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದ ಪಡೆದಿರುವ ವಾಸಸ್ಥಳ ದೃಢೀಕರಣ ಪತ್ರದ ಪ್ರತಿ ಪಡೆದಿರಬೇಕು.
ಅರ್ಜಿಯಲ್ಲಿ ಅಭ್ಯರ್ಥಿಗಳ ದೂರವಾಣಿ ಸಂಖ್ಯೆಗಳನ್ನು ನಮೂದಿಸುವುದು ಕಡ್ಡಾಯ. ಅಭ್ಯರ್ಥಿಗಳು ತಮ್ಮ ವಿರುದ್ಧ ಯಾವುದೇ ಕ್ರಿಮಿನಲಲ್ಮೊಕದ್ದಮೆ ಇಲ್ಲದೇ ಇರುವ ಬಗ್ಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ನಿರಪೇಕ್ಷಣಾ ಪತ್ರ ಪಡೆದು ಸಲ್ಲಿಸುವುದು.
ಅರ್ಜಿ ಭರ್ತಿ ಮಾಡಿ ದ್ವಿಪ್ರತಿಯಲ್ಲಿ ಎಲ್ಲಾ ಅಗತ್ಯ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಮಾ. 4 ರಂದು ಸಂಜೆ 5 ಗಂಟೆಯೊಳಗೆ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಪ್ರಾದೇಶಿಕ ಪ್ರವಾಸಿ ಕಚೇರಿ, ಎ.ವಿ.ಕೆ. ಕಾಲೇಜು ರಸ್ತೆ, ಹಾಸನ ಇವರಿಗೆ ಸಲ್ಲಿಸುವುದು. ಭರ್ತಿಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಸೀಲ್ ಮಾಡಿ ಈ ಕಚೇರಿಗೆ ಸಲ್ಲಿಸುವುದು.