ದರೋಡೆಕೋರರ ಬಂಧನ: ರು. 37 ಲಕ್ಷದ ಆಭರಣ ವಶ
ಹಾಸನ: ನಾಲ್ಕು ಮಂದಿ ಮನೆ ಮತ್ತು ಸರಗಳ್ಳರನ್ನು ಬಂಧಿಸಿದ್ದು, ಅವರಿಂದ 37 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ತಾಲೂಕಿನ ಕಂದಲಿಯ ಜರ್ತಾಬ್ (22), ಪೆನ್ಷ್ನ್ ಮೊಹಲ್ಲಾದ ಶಾಹಿದ್ (23), ಅರಸೀಕೆರೆಯ ಸಲೀಂ ಪಾಷ (25) ಮತ್ತು ಪೆನ್ಷನ್ ಮೊಹಲ್ಲಾದ ಫರೀದ್ (25) ಎಂಬವರನ್ನು ಬಂಧಿಸಲಾಗಿದೆ. ಇವರು 2006ರಿಂದ 2014ರವರೆಗೆ ನಡೆಸಿದಂತಹ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು. ಈ ಆರೋಪಿಗಳು ಕಳೆದ 8 ವರ್ಷಗಳಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರು 2006ರಿಂದ ಇಲ್ಲಿಯವರೆಗೆ ಒಟ್ಟು 35 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 35 ಪ್ರಕರಣಗಳಲ್ಲಿ 1.08 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಮತ್ತು 2 ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ 37 ಲಕ್ಷ ರು. ಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಆರೋಪಿಗಳು ಮಾಡಿದ್ದ ಕಳವು ಪ್ರಕರಣಗಳಾದ ಹಾಸನ ನಗರ ಠಾಣೆಯಲ್ಲಿ 4, ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ 5, ಪೆನ್ಷನ್ ಮೊಹಲ್ಲಾ ವ್ಯಾಪ್ತಿಯಲ್ಲಿ 5, ದುದ್ದ ಠಾಣಾ ವ್ಯಾಪ್ತಿಯಲ್ಲಿ 1, ಶಾಂತ್ರಿಗ್ರಾಮ ವ್ಯಾಪ್ತಿಯಲ್ಲಿ 3, ಗೊರೂರು ವ್ಯಾಪ್ತಿಯಲ್ಲಿ 2, ಬೇಲೂರಿನಲ್ಲಿ 1, ಹಳೇಬೀಡಿನಲ್ಲಿ 4, ಅರೇಹಳ್ಳಿಯಲ್ಲಿ 1, ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1, ಬಾಣಾವರದಲ್ಲಿ 1, ಆಲೂರಿನಲ್ಲಿ 5, ಮಡಿಕೇರಿ ಟೌನ್ ಠಾಣಾ ವ್ಯಾಪ್ತಿಯಲ್ಲಿ 1 ಹಾಗೂ ರೇಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣಗಳು ಪತ್ತೆಯಾಗಿದೆ ಎಂದರು. ಈ ಅಪರಾಧ ಪತ್ತೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 1 ಲಕ್ಷ ರು. ಗಳ ಬಹುಮಾನ ನೀಡಲಾಗಿದೆ ಎಂದು ಹೇಳಿದರು.