ವಾಹನ ಬಾಡಿಗೆ ಪಡೆದು ಹಣ ನೀಡದೆ ವಂಚನೆ
ಸಕಲೇಶಪುರ: ವಂಚಕನೊಬ್ಬ ಬಾಡಿಗೆ ನೀಡುವುದಾಗಿ ಒಂದು ವ್ಯಾನ್ ಹಾಗೂ ಎರಡು ಗೂಡ್ಸ್ ಆಟೋಗಳನ್ನು ಹಾಸನಕ್ಕೆ ಕರೆದೊಯ್ದು ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶನಿವಾರ ಪಟ್ಟಣದ ಬಾಡಿಗೆ ಕಾರುನಿಲ್ದಾಣಕ್ಕೆ ಬಂದ ವ್ಯಕ್ತಿಯೋರ್ವ ಹೊಳೆನರಸೀಪುರದಿಂದ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯೊಬ್ಬರನ್ನು ಕರೆತರಬೇಕು ಎಂದು ಹೇಳಿ ವ್ಯಾನ್ ಬಾಡಿಗೆ ಪಡೆದಿದ್ದಾನೆ.
ನಂತರ, ಇದೇ ವ್ಯಕ್ತಿ ಗೂಡ್ಸ್ ಆಟೋ ನಿಲ್ದಾಣದಲ್ಲಿ ಹಾಸನದಿಂದ ಮನೆ ಸಾಮಾನುಗಳನ್ನು ತರಬೇಕು ಎಂದು ಎರಡು ಆಟೋಗಳನ್ನು ಬಾಡಿಗೆಗೆ ಪಡೆದಿದ್ದು, ಹಾಸನದ ತಣ್ಣಿರಹಳ್ಳ ಸಮೀಪದ ಚಿಕನ್ ಅಂಗಡಿಯಲ್ಲಿ 70 ಕೆ.ಜಿ ಮಾಂಸವನ್ನು ಕತ್ತರಿಸುವಂತೆ ಹೇಳಿ ಸಮೀಪದ ದಿನಸಿ ಅಂಗಡಿಯಲ್ಲಿ ದಿನಸಿ, ಸಾಮಾನು ಕಟ್ಟಲು ಹೇಳಿದ್ದಾನೆ.
ನಂತರ ಬ್ಯಾಂಕಿನಿಂದ ಹಣ ತರಬೇಕಾಗಿದ್ದು, ಅದುವರೆಗೆ ಹಣ ನೀಡಿರುವಂತೆ ಗೂಡ್ಸ್ ಆಟೋ ಚಾಲಕನಿಂದ ರು. 600 ಪಡೆದು ಚಿಕನ್ ಅಂಗಡಿ ಸಮೀಪವೇ ಇರುವಂತೆ ಹೇಳಿದ್ದಾನೆ. ವ್ಯಾನಿನಲ್ಲಿ ಹಾಸನ ನಗರವನ್ನೆಲ್ಲ ಸುತ್ತುಹಾಕಿದ ನಂತರ ಬ್ಯಾಂಕಿನಿಂದ ಹಣ ತರುವುದಾಗಿ ಹೇಳಿ ಹೋದವನು ವಾಪಸ್ಸಾಗಿಲ್ಲ.
ಕೊನೆಗೆ ಆಟೋ ಹಾಗೂ ವ್ಯಾನ್ ಚಾಲಕರಿಗೆ ತಾವು ಮೋಸ ಹೋಗಿರುವುದು ತಿಳಿದ ನಂತರ ಪಟ್ಟಣಕ್ಕೆ ವಾಪಸ್ ಬಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.