ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುಸಜ್ಜಿತ ಕಟ್ಟಡವಿದೆ.. ಸೌಕರ್ಯವಿಲ್ಲ

Rashmi Kasaragodu
Updated On : 4 Feb 2014, 1:23 am

 ಎಚ್.ವಿ. ರಾಘವೇಂದ್ರ
ಕ.ಪ್ರ.ವಾರ್ತೆ ಟಿ ಆಲೂರು ಟಿ ಫೆ. 3
ಪಟ್ಟಣದಲ್ಲಿ ಇರುವ ಬಸ್ ನಿಲ್ದಾಣ ಸುಸಜ್ಜಿತ ಕಟ್ಟಡವನ್ನೇನೂ ಹೊಂದಿದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟು ಇದ್ದು, ಪ್ರಯಾಣಿಕರಿಗೆ ಅನಾನುಕೂಲವಾಗಿ ಪರಿಣಮಿಸಿದೆ.
ಇತರೇ ಎಲ್ಲಾ ತಾಲ್ಲೂಕುಗಳಿಗಿಂತಲೂ ಉತ್ತಮ ಕಟ್ಟಡ ಹೊಂದಿರುವ ಈ ಬಸ್ ನಿಲ್ದಾಣದಲ್ಲಿ ಹಾಲಿ ಇಬ್ಬರು ಸಂಚಾರಿ ನಿಯಂತ್ರಕರಿದ್ದು, ಅವರು ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಿಯಂತ್ರಕರಿಲ್ಲ: ಹೀಗಾಗಿ ನಿಲ್ದಾಣಕ್ಕೆ ಬರುವ ಎಲ್ಲ ಬಸ್ಗಳಿಗೂ ಎಂಟ್ರಿ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ಬಂದು ವಿಚಾರಿಸಿದರೆ ಯಾವ ಬಸ್ಗಳು ಬಂದು ಹೋಗಿವೆ ಯಾವು ಬರಬೇಕು ಎಂಬುದನ್ನು ತಿಳಿಸಲು ಸಂಚಾರಿ ನಿಯಂತ್ರಕರು ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಬಸ್ ಬಂದಿದ್ದೇ ಗೊತ್ತಾಗಲ್ಲ: ಇದರ ಲಾಭ ಪಡೆದು ಕೆಲವು ಎಕ್ಸ್ಪ್ರೆಸ್ ಬಸ್ಗಳು ಆಲೂರಿಗೆ ಬಾರದೆ ಬೈಪಾಸ್ ರಸ್ತೆಯಲ್ಲೇ ಸಂಚರಿಸುತ್ತಿವೆ. ಕೆಲವು ಬಸ್ನಗಳು ಪಟ್ಟಣಕ್ಕೆ ಬಂದರೂ ನಿಲ್ದಾಣದ ಒಳಗೆ ಬಾರದೆ ಪೊಲೀಸ್ ಠಾಣೆಯ ಮುಂಭಾಗವೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದು, ಇದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಗಾಗಿ ಕಾಯಬೇಕಿದೆ.
ರಾತ್ರಿ ವೇಳೆ ಅನೈತಿಕತೆ: ಬಸ್ ನಿಲ್ದಾಣದಲ್ಲಿ ಬೆಳಗಿನ ಸಮಯದಲ್ಲಿ ಮಾತ್ರ ಟಿ.ಸಿ.ಗಳು ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ಯಾರೊಬ್ಬರೂ ಇರದ ಕಾರಣ ಆಗ ನಿಲ್ದಾಣಕ್ಕೆ ಬರಲು ಪ್ರಯಾಣಿಕರು ಹೆದರುವಂತಾಗಿದೆ. ರಾತ್ರಿ ವೇಳೆಯಲ್ಲಿ ಸ್ಮಶಾನ ಮೌನ ಆವರಿಸುತ್ತಿದ್ದು, ಹೇಳುವವರು, ಕೇಳುವವರು ಯಾರೂ ಇಲ್ಲದೆ ನಿಲ್ದಾಣ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಡುತ್ತಿದೆ.
ಅಪಘಾತಗಳಿಗೆ ಆಹ್ವಾನ: ನಿಲ್ದಾಣಕ್ಕೆ ಖಾಸಗಿ ವಾಹನಗಳು, ಬಿಡಾಡಿ ದನಗಳು, ಬೀದಿ ನಾಯಿಗಳು ಬರುತ್ತಿದ್ದು, ಇದರಿಂದಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ. ಬಸ್ ನಿಲ್ದಾಣದ ಅಂದಗೆಡಿಸಲು ನಿಲ್ದಾಣದ ಮುಂಭಾಗದಲ್ಲಿ ಫ್ಲೆಕ್ಸ್ಗಳನ್ನು ಹಾಕಲಾಗಿದ್ದು, ಇವರು ಪಟ್ಟಣ ಪಂಚಾಯ್ತಿಯಿಂದ ಅನುಮತಿ ಪಡೆಯದಿರುವುದು ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ಗೆ ಸ್ಥಳ ಬಿಡದಿರುವುದು ಇನ್ನೊಂದು ಸಮಸ್ಸೆ. ಎಲ್ಲಾ ನಿಲ್ದಾಣಗಳಲ್ಲೂ ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಇಲ್ಲಿ ಮಾತ್ರ ಅದನ್ನು ಕೈ ಬಿಡಲಾಗಿದೆ. ಇದರಿಂದಾಗಿ ಖಾಸಗಿ ಬೈಕ್, ಕಾರ್ಗಳು ಎಲ್ಲಿ ಬೇಕಂದರಲ್ಲಿ ನಿಲ್ಲಿಸಿ ಹೋಗಬೇಕಾಗಿದ್ದು, ಇದು ಸಹ ಅಪಘಾತಕ್ಕೆ ದಾರಿ ಮಾಡಿಕೊಟ್ಟಿದೆ.         
ಆಸನಗಳ ಅವ್ಯವಸ್ಥೆ: ನಿಲ್ದಾಣದಲ್ಲಿ ಇರುವ ಪುಟ್ಟ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಬಿದ್ದಿದೆ. ಸಂಘ ಸಂಸ್ಥೆಯವರು ಸೇರಿ ಇದರ ಅಭಿವೃದ್ಧಿಗೊಳಿಸಲು ಮುಂದೆ ಬಂದಿದ್ದು, ನೀರಿನ ವ್ಯವಸ್ಥೆ ಇಲ್ಲದೆ ಅದು ಸಹ ನೆನೆಗುದಿಗೆ ಬಿದ್ದಿದೆ. ಅಲ್ಲದೇ, ಇಲ್ಲಿರುವ ಶೌಚಾಲಯದ ಶೌಚಗುಂಡಿ ತುಂಬಿ ಗಬ್ಬು ನಾರುತ್ತಿದ್ದು, ಪಕ್ಕದ ಖಾಜಿ ಮೊಹಲ್ಲಾ ನಿವಾಸಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ಪ್ರತಿದಿನವೂ ಈ ಗಬ್ಬು ವಾಸನೆಯನ್ನು ಸಹಿಸಿಕೊಂಡು ದಿನದೂಡಬೇಕಿದೆ.
ಪ್ರತಿಭಟನೆ ನಡೆದಿತ್ತು: ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಳೆದ 8 ತಿಂಗಳ ಹಿಂದೆ  ಸಾರ್ವಜನಿಕರು ಪ್ರತಿಭಟನೆ ನಡೆಸಿ ಬಸ್ ನಿಲ್ದಾಣದ ಮುಂಭಾಗ ಅನುಮತಿ ಇಲ್ಲದೆ, ಕೆಲವರು ದೊಡ್ಡ, ದೊಡ್ಡ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿದ್ದರು. ಅಲ್ಲದೇ, ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿರುವ ಶೌಚಾಲಯದ, ಶೌಚಗುಂಡಿಯನ್ನು ಸರಿಯಾದ ಮಾದರಿಯಲ್ಲಿ ನಿರ್ಮಿಸಬೇಕು. ಆಸನಗಳ ವ್ಯವಸ್ಥೆ ಹೆಚ್ಚಿಸಿ ಅವುಗಳನ್ನು ಪ್ಲಾಟಟ್ಫಾರಂನಿಂದ ಮೇಲ್ಭಾಗಕ್ಕೆ ಸ್ಥಳಾಂತರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು.  
ಪ್ರಮುಖ ಬೇಡಿಕೆಗಳು: ಹೈಮಾಸ್ಕ್ ದೀಪ ಸರಿಪಡಿಸಬೇಕು. ಉದ್ಯಾನವನ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬೇಕು, ನಗರ ಸಾರಿಗೆಯನ್ನು ಆಲೂರು- ಪಾಳ್ಯವರೆಗೂ ವಿಸ್ತರಿಸಬೇಕು.  ಮುಖ್ಯವಾಗಿ ಒಬ್ಬ ಕಾವಲುಗಾರನನ್ನು ನಿಯುಕ್ತಿಗೊಳಿಸಬೇಕು, ಹಾಗೂ ಆಲೂರಿಗೆ ಬರುವ ಎಲ್ಲಾ ಬಸ್ಗಳು ಕಡ್ಡಾಯವಾಗಿ ಎನ್.ಆರ್. ಸರ್ಕಲ್, ಸಂತೇಪೇಟೆ, ಹಾಗೂ ತಣ್ಣೀರುಹಳ್ಳ ಮಾರ್ಗವಾಗಿ ಆಲೂರಿಗೆ ಬರುವುದರ ಜೊತೆಗೆ, ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸುಸ್ಥಿತಿಯಲ್ಲಿರುವ ಬಸ್ಗಳನ್ನು ಹಾಕಬೇಕು.
ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿಗಳು ಈ ಎಲ್ಲಾ ಅವ್ಯವಸ್ಥೆಗಳನ್ನು ಶೀಘ್ರ  ಸರಿಪಡಿಸುವ ಭರವಸೆ ನೀಡಿ ಹೋಗಿದ್ದರು, ಆದರೆ ಅವರು ನೀಡಿದ ಭರವಸೆ ಈವರೆಗೂ ಭರವಸೆಯಾಗಿಯೇ ಉಳಿದಿದೆ. ಅಲ್ಪ ಸೌಕರ್ಯವನ್ನೂ ಒದಗಿಸದೇ, ಉದ್ದಟತನದಿಂದ ವರ್ತಿಸುತ್ತಿದ್ದು ವಾರದೊಳಗೆ ಬಸ್ ನಿಲ್ದಾಣಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ, ಆಲೂರಿಗೆ ಬರುವ ಎಲ್ಲಾ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟಣದ ಸಂಘ, ಸಂಸ್ಥೆಗಳು ಎಚ್ಚರಿಕೆ ನೀಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement