ಒತ್ತುವರಿ ಜಮೀನು ತೆರವಿಗೆ ಧರಣಿ
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಜಮೀನನ್ನು ಖಾಸಗಿಯವರು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಶಿಕ್ಷಣ ಇಲಾಖೆ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಸಂಘಟನೆಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಹಿರೀಸಾವೆ ಬಾಲಿಕಾ ಪ್ರೌಢಶಾಲೆಗೆ ಸೇರಿದ 15ಗುಂಟೆ ಜಮೀನನ್ನು ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿದ್ದು, ಅದನ್ನು ಕೂಡಲೇ ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಶಿಕ್ಷಣ ಇಲಾಖಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಖಂಡಿಸಿ ಧರಣಿ ನಡೆಸಿದರು.
ಸೂಕ್ತ ಉತ್ತರ ನೀಡಬೇಕು: ಹಿರೀಸಾವೆ ಗ್ರಾಮದವರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ ಸಂದರ್ಭದಲ್ಲಿ ಒತ್ತುವರಿ ಪ್ರದೇಶವನ್ನು ಅಳತೆ ಮಾಡಿಸಿ ಭೂಮಿಯನ್ನು ತಮ್ಮ ಇಲಾಖೆ ವಶಕ್ಕೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿ 15 ದಿನಗಳು ಕಳೆದಿದ್ದು, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹಿರೀಸಾವೆ ಹೋಬಳಿ ಕರವೇ ಅಧ್ಯಕ್ಷ ಯೋಗೇಶ್ ಆರೋಪಿಸಿದರು.
ಶಾಲೆಯ ಜಮೀನನ್ನು ಒತ್ತುವರಿ ಮಾಡಿರುವರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಣ ಪಡೆದು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಎಂದು ಆರೋಪಿಸಿದ ಯೋಗೇಶ್ ಈ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಸೂಕ್ತ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮದ್ಯಾಹ್ನ ನಾಲ್ಕು ಗಂಟೆಯಾದರೂ ಬಾರದ ಕಾರಣ ಧರಣಿನಿರತರು ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಕಚೇರಿಯಲ್ಲಿದ್ದ ಎಲ್ಲಾ ನೌಕರರನ್ನು ಕಚೇರಿಯಿಂದ ಆಚೆಗೆ ಕಳುಹಿಸಿ ಬೀಗ ಹಾಕಲು ಮುಂದಾದಾಗ ಸರ್ಕಲ್ ಇನ್ಸ್ಪೆಕ್ಟರ್ ಶೈಲೇಂದ್ರ ಮಧ್ಯಪ್ರವೇಶಿಸಿ ಧರಣಿ ನಿರತರನ್ನು ಸಮಾಧಾನಪಡಿಸಿದರು. ನಂತರ, ತಹಸೀಲ್ದಾರ್ ಬಳಿ ಕರದೊಯ್ಯಲಾಯಿತು. ಅಲ್ಲಿ, ನಡೆದ ಚರ್ಚೆಯ ವೇಳೆ ಫೆ. 12ರಂದು ಭೂಮಿ ಒತ್ತುವರಿ ತೆರವು ಕಾರ್ಯಕ್ಕೆ ಮೂಹರ್ತ ನಿಗದಿಯಾಯಿತು. ಈ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಧರಣಿ ವಾಪಸ್ ಪಡೆದರು.
ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಧು ಕರಡೆ, ರೈತ ಸಂಘದ ಸತ್ತಿಗೌಡ, ಅರಳಾಪುರ ಮಂಜು, ಎವರ್ಗ್ರೀನ್ ಮೂವ್ಮೆಂಟ್ಸ್ನ ರಾಜಕುಮಾರ್, ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಇದ್ದರು.